ಮೈಸೂರು,ಆಗಸ್ಟ್,23,2021(www.justkannada.in): ಮೈಸೂರಿನ ಶಿಲ್ಪಿ ಬಿ ಎಸ್ ಯೋಗಿರಾಜ್ ಅವರಿಗೆ ಜಕಣಾಚಾರಿ ಪ್ರಶಸ್ತಿ ಒಲಿದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2019-20ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆಯಾದ ಗಣ್ಯರಿಗೆ ಆಗಸ್ಟ್ 18 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು.
ಕರ್ನಾಟಕ ಶಿಲ್ಪಗಳ ತವರೂರು. ನಾಡಿನಾದ್ಯಂತ ಸುಂದರ ಶಿಲ್ಪಗಳನ್ನು ಮಂದಿರಗಳಲ್ಲಿ ಕಾಣಬಹುದು. ಇಂತಹ ಒಂದು ಪರಂಪರೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕನ್ನಡ ನಾಡಿನ ಅಮರಶಿಲ್ಪಿ ಎಂದೇ ಖ್ಯಾತಿ ಪಡೆದ ಜಕಣಾಚಾರಿಯ ಹೆಸರಿನಲ್ಲಿ ಶಿಲ್ಪಿಗಳಿಗೆ ಪ್ರಶಸ್ತಿ ನೀಡಲು 1995ರಲ್ಲಿ ಸರ್ಕಾರ ನಿರ್ಧರಿಸಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ.
ಇದರಲ್ಲಿ ಮೈಸೂರಿನ ಶಿಲ್ಪಿ ಬಿ ಎಸ್ ಯೋಗಿರಾಜ್ ಅವರಿಗೆ ಜಕಣಾಚಾರಿ ಪ್ರಶಸ್ತಿ ಲಭಿಸಿರುವುದು ಮೈಸೂರಿಗೆ ಒಂದು ಹೆಮ್ಮೆಯ ವಿಚಾರ. ಇದರ ವಿಚಾರವಾಗಿ ಶಿಲ್ಪಿ ಬಿ.ಎಸ್ ಯೋಗಿರಾಜ್ ಅವರು ಇಂದು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಯೋಗಿರಾಜ್ ಸುಮಾರು ಐದು ತಲೆಮಾರುಗಳಿಂದ ಶಿಲ್ಪ ಕಲೆಯನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಯೋಗಿರಾಜ್ ಅವರು ಈಗ ಮಕ್ಕಳಿಗೆ ಆ ವೃತ್ತಿಯನ್ನು ಧಾರೆ ಎರೆದಿದ್ದಾರೆ. ಮಗ ಅರುಣ್ ಯೋಗಿರಾಜ್ ಅವರು ಕೂಡ ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆ ಪಡೆದಿದ್ದಾರೆ, ಶಂಕರಾಚಾರ್ಯರ ಪ್ರತಿಮೆಯನ್ನು ಪ್ರಧಾನಮಂತ್ರಿ ಯವರು ಅರುಣ್ ಯೋಗಿರಾಜ್ ಅವರಿಂದ ಮಾಡಿಸಿರುವುದು ಕರ್ನಾಟಕಕ್ಕೆ ಹೆಮ್ಮೆ ತರುವ ವಿಚಾರವಾಗಿದೆ.
Key words: prestigious -Jakanachari Award – sculptor –yogiraj-Mysore.