ಮೈಸೂರು,ಮೇ,23,2022(www.justkannada.in): ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ, ಯೋಗ ದಿನಾಚರಣೆಗೆ ರೇಸ್ ಕೋರ್ಸ್ ಸ್ಥಳವೇ ಸೂಕ್ತ ಎಂದು ಸಲಹೆ ಕೊಟ್ಟಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಅರಮನೆ ಆವರಣದಲ್ಲಿ ಕೇವಲ 15 ಸಾವಿರ ಜನರಷ್ಟೇ ಸೇರಬಹುದು. ಆದರೆ ರೇಸ್ ಕೋರ್ಸ್ ನಲ್ಲಿ 1.5ಲಕ್ಷ ಜನ ಸೇರಿಸಬಹುದು. ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಮೋದಿ ಬರುವ ನೆಪದಲ್ಲೇ ಮೈಸೂರಿನ ರಸ್ತೆಗಳ ಅಭಿವೃದ್ಧಿಗೂ ಸರ್ಕಾರದಿಂದ ಹಣಬಿಡುಗಡೆ ಮಾಡಿಸಿಕೊಳ್ಳಲಾಗುತ್ತದೆ. ಈ ಬಗ್ಗೆ ಉಸ್ತುವಾರಿ ಸಚಿವರು ಕ್ರಮವಹಿಸಿದ್ದಾರೆ. ಹೀಗಾಗಿ ಸಿಎಂ ವಿದೇಶ ಪ್ರವಾಸ ಮುಗಿದ ಬಳಿಕ ಮೈಸೂರಿಗೆ ಬಂದು ಸಭೆ ನಡೆಸುತ್ತಾರೆ. ಯೋಗ ಪ್ರದರ್ಶನದ ಗಿನ್ನಿಸ್ ರೆಕಾರ್ಡ್ ವಿಚಾರ ಸಂಬಂಧ ಗಿನ್ನಿಸ್ ರೆಕಾರ್ಡ್ ಗೆ ಕೆಲ ತಾಂತ್ರಿಕ ಸಮಸ್ಯೆಗಳಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು.
ಮೈಸೂರು ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿವಾದ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಮೈಸೂರು ಮಹಾನಗರ ಪಾಲಿಕೆಯಿಂದ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. 10 ಕೋಟಿ ಮುಂಗಡ ಹಣ ಪಾವತಿಸಿ ಕೆಲಸ ಆರಂಭಿಸಲು ಆದೇಶ ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ ಕೆಲಸ ಆರಂಭ ಆಗುತ್ತದೆ. ಮುಂದಿನ ಮಾರ್ಚ್ ನೊಳಗೆ ಮೊದಲ ಹಂತದ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಪೂರ್ಣ. ಸುಮಾರು 500 ಕಿ.ಮೀ ವ್ಯಾಪ್ತಿಯ ಮೊದಲ ಹಂತದ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಮಾಡಲಾಗುತ್ತದೆ. ಮುಂದಿನ ಚುನಾವಣಾ ವೇಳೆಗೆ ಮನೆಮನೆಗೆ ಪೈಪ್ ಲೈನ್ ಮೂಲಕ ಗ್ಯಾಸ್ ಸಿಗಲಿದೆ ಎಂದು ಹೇಳಿದರು.
Key words: Prime Minister –Modi- Arrival -International Yoga Day – Pratap simha