ಮೈಸೂರು,ಡಿಸೆಂಬರ್,26,2024 (www.justkannada.in): ಸಂಸದನಾದ ಮೇಲೆ ನಾನು ಹೆಚ್ಚು ಟಾರ್ಗೆಟ್ ಆಗಿದ್ದೇನೆ. ಹಿಂದಿನಿಂದಲೂ ರಾಜಮನೆತನವನ್ನು ಸರ್ಕಾರ ಸಾಕಷ್ಟು ಟಾರ್ಗೆಟ್ ಮಾಡಿದೆ ಎಂದು ಮೈಸೂರು-ಕೊಡಗು ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಒಡೆಯರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್, ಹಲವು ವೈಯಕ್ತಿಕ ವಿಚಾರಗಳನ್ನು ಹೇಳಲು ಇಚ್ಛೆಪಡಲ್ಲ. ನಾನು ಸಂಸದನಾದ ಮೇಲೆ ಹೆಚ್ಚು ಟಾರ್ಗೆಟ್ ಆಗಿದ್ದೀನಿ. ರಾಜಕಾರಣಕ್ಕೆ ಬಂದ ಮೇಲೆ ನನ್ನನ್ನ ಹೆಚ್ಚು ಗುರಿ ಮಾಡಿದ್ದಾರೆ ಎಂದರು.
ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಆ ರಸ್ತೆಗೆ ರಾಜಕುಮಾರಿಯ ಸ್ಮರಣಾರ್ಥ ಹೆಸರು ಇಡಲಾಗಿದೆ. ಪ್ರಿನ್ಸೆಸ್ ರೋಡ್ ಹೆಸರು ಬದಲಾವಣೆಗೆ ವಿರೋಧವಿದೆ. ಯಾವುದೇ ಕಾರಣಕ್ಕೂ ಆ ರಸ್ತೆ ಹೆಸರು ಬದಲಾಗಬಾರದು. ಈ ಕುರಿತು ನಾವು ಕಾನೂನು ಹೋರಾಟ ಮಾಡುತ್ತೇವೆ. ಚಾಮುಂಡಿಬೆಟ್ಟ ಪ್ರಾಧಿಕಾರ, ಕುರುಬಾರಹಳ್ಳಿ ವಿಚಾರಗಳಲ್ಲೂ ಕೂಡ ನಾವು ಟಾರ್ಗೆಟ್ ಆಗಿದ್ದೇವೆ ಎಂದರು.
ಮಾಜಿ ಸಂಸದ ಪ್ರತಾಪ್ ಸಿಂಹಗೆ ಟಾಂಗ್
ಸಿದ್ದರಾಮಯ್ಯ ಹೆಸರಿಡಲಿ ಎಂದ ಮಾಜಿ ಸಂಸದ ಪ್ರತಾಪ್ ಸಿಂಹಗೂ ಟಾಂಗ್ ಕೊಟ್ಟ ಸಂಸದ ಯದುವೀರ್, ಪ್ರತಾಪ್ ಸಿಂಹ ಇತಿಹಾಸ ಮರೆತಿದ್ದಾರೆ ಅನ್ನಿಸುತ್ತೆ. ನಾನು ಇತಿಹಾಸ ಹೇಳಿದ ಮೇಲೆ ಮತ್ತೆ ನೆನಪಾಗಬಹುದು. ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ನನ್ನ ವಿರೋಧವಿಲ್ಲ. ಆದ್ರೆ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ಬೇಡ. ಹಿಂದಿನಿಂದಲೂ ಆ ರಸ್ತೆಯನ್ನು ಪ್ರಿನ್ಸೆಸ್ ರಸ್ತೆ, ಕೆ.ಆರ್.ಎಸ್ ರಸ್ತೆ ಅಂತಾ ಕರೆಯುತ್ತಾರೆ. ರಾಜಕುಮಾರಿ ಕೃಷ್ಣರಾಜಮ್ಮಣ್ಣಿ ಹಾಗೂ ಅವರ ಮಕ್ಕಳು ಟಿಬಿ ಕಾಯಿಲೆಯಿಂದ ಮೃತರಾಗುತ್ತಾರೆ . ಈ ರೀತಿ ಯಾರಿಗೂ ಆಗಬಾರದು ಅಂತ ನಾಲ್ವಡಿ ಕೃಷ್ಣರಾಜ ಒಡೆಯರ್ ತಂಗಿ ನೆನೆಪಿಗೆ ಅಲ್ಲಿ ಟಿಬಿ ಆಸ್ಪತ್ರೆ ಕಟ್ಟಿಸುತ್ತಾರೆ ಅದಕ್ಕೆ ಆ ರಸ್ತೆಯನ್ನು ಪ್ರಿನ್ಸೆಸ್ ರಸ್ತೆ ಅಥವಾ ರಾಜಕುಮಾರಿ ರಸ್ತೆ ಅಂತ ಕರೆಯುತ್ತಾರೆ. ಈಗ ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಅಂತ ನಾಮಕರಣ ಮಾಡಲು ಪಾಲಿಕೆ ತೀರ್ಮಾನ ಮಾಡಿದೆ. ಮೈಸೂರು ಮಹಾನಗರ ಪಾಲಿಕೆಗೆ ಚುನಾವಣೆ ಆಗಿಲ್ಲ. ಯಾರು ಜನಪ್ರತಿನಿಧಿಗಳು ಇಲ್ಲ. ಈಗ ಈ ರೀತಿ ತೀರ್ಮಾನ ಸರಿಯಲ್ಲಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸಾಕಷ್ಟು ರಸ್ತೆಗಳಿವೆ ಅಲ್ಲಿ ಯಾವುದಕ್ಕಾದರೂ ಸಿದ್ದರಾಮಯ್ಯ ಹೆಸರಿಡಲಿ. ಇದೇ ವಿಚಾರಕ್ಕೆ ಹಿಂದಿನಿಂದಲೂ ಸಾಕಷ್ಟು ಜನರು ಹೋರಾಟ ಮಾಡ್ತಿದ್ದಾರೆ. ಈಗ ಪಾಲಿಕೆಗೆ ಸಾಕಷ್ಟು ಜನ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಯದುವೀರ್ ತಿಳಿಸಿದರು.
Key words: Opposition, changing, name, Princess Road, MP, Yaduveer