ಕಾರಾಗೃಹಗಳಲ್ಲಿ ಇದ್ದಾರೆ 15,257 ಕೈದಿಗಳು ಎಂದು ಹೈಕೋರ್ಟ್​ಗೆ ಸರ್ಕಾರದ ಮಾಹಿತಿ: ನಿಗದಿತ ಪ್ರಮಾಣಕ್ಕಿಂತ ಶೇ.11 ಅಧಿಕ

ಬೆಂಗಳೂರು:ಆ-3: ರಾಜ್ಯದಲ್ಲಿನ ಕಾರಾಗೃಹಗಳು 13,622 ಕೈದಿಗಳ ಸಾಮರ್ಥ್ಯ ಹೊಂದಿದ್ದು, ಸದ್ಯ 15,257 ಕೈದಿಗಳಿದ್ದಾರೆ ಎಂದು ಹೈಕೋರ್ಟ್​ಗೆ ಸರ್ಕಾರ ಮಾಹಿತಿ ನೀಡಿದೆ.

ಕಾರಾಗೃಹಗಳಲ್ಲಿ ಸಾಮರ್ಥ್ಯ ಮೀರಿ ಕೈದಿಗಳನ್ನು ಇರಿಸುವುದು, ಸಿಬ್ಬಂದಿ ಮತ್ತು ಮೂಲಸೌಕರ್ಯ ಕೊರತೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಸಿಜೆ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಎ.ಎಸ್. ಬೆಳ್ಳುಂಕೆ ಅವರಿದ್ದ ಪೀಠ ನಡೆಸಿತು.

ಕಾರಾಗೃಹಗಳಲ್ಲಿನ ಕೈದಿಗಳ ಸ್ಥಿತಿಗತಿ ಕುರಿತು ಕಾರಾಗೃಹಗಳ ಡಿಜಿಪಿ ಸುರೇಶ್ ಅವರ ಪ್ರಮಾಣ ಪತ್ರವನ್ನು ಸರ್ಕಾರಿ ವಕೀಲ ಅಚ್ಚಪ್ಪ ನ್ಯಾಯಪೀಠಕ್ಕೆ ಸಲ್ಲಿಸಿದರು. ರಾಜ್ಯದ ಕಾರಾಗೃಹಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಶೇ.11 ಕೈದಿಗಳ ಸಂಖ್ಯೆ ಹೆಚ್ಚಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಜೈಲುಗಳಲ್ಲಿ ಕೈದಿಗಳ ದಟ್ಟಣೆ ಕಡಿಮೆ ಇದೆ. ಜಿಲ್ಲಾ ಕಾರಾಗೃಹಗಳ ವಿಸ್ತರಣೆ, ಮೇಲ್ದರ್ಜೆ ಸೇರಿ ಕೈದಿಗಳ ಸಾಮರ್ಥ್ಯ ಹೆಚ್ಚಳಕ್ಕೆ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದರು. ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠ 23ಕ್ಕೆ ವಿಚಾರಣೆ ಮುಂದೂಡಿತು.

ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳು: ರಾಜ್ಯದ 9 ಕೇಂದ್ರ ಕಾರಾಗೃಹಗಳ ಕೈದಿಗಳ ಸಾಮರ್ಥ್ಯ 7,817 ಇದ್ದರೆ, ಸದ್ಯ 10,397 ಕೈದಿಗಳಿದ್ದಾರೆ. 21 ಜಿಲ್ಲಾ ಕಾರಾಗೃಹಗಳಲ್ಲಿ 3,857 ಕೈದಿಗಳ ಸಾಮರ್ಥ್ಯವಿದ್ದು, ಹಾಲಿ 4,075 ಕೈದಿಗಳಿದ್ದಾರೆ. 29 ತಾಲೂಕು ಕಾರಾಗೃಹಗಳು ಒಟ್ಟು 1,968 ಕೈದಿಗಳ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 755 ಕೈದಿಗಳಿದ್ದಾರೆ. 80 ಕೈದಿಗಳ ಸಾಮರ್ಥ್ಯ ಹೊಂದಿರುವ 1 ಮುಕ್ತ ಕಾರಾಗೃಹದಲ್ಲಿ 30 ಕೈದಿಗಳಿದ್ದಾರೆ.

641 ಮಹಿಳಾ ಕೈದಿಗಳು

ರಾಜ್ಯದ ಕಾರಾಗೃಹಗಳಲ್ಲಿ 437 ವಿಚಾರಣಾಧೀನ ಕೈದಿಗಳು ಮತ್ತು 204 ಶಿಕ್ಷೆಗೊಳಗಾಗಿರುವ ಕೈದಿಗಳು ಸೇರಿ ಒಟ್ಟು 641 ಮಹಿಳಾ ಕೈದಿಗಳಿದ್ದಾರೆ. 6 ವರ್ಷಕ್ಕೂ ಕಡಿಮೆ ವಯಸ್ಸಿನ 41 ಮಕ್ಕಳಿದ್ದು, ಈ ಪೈಕಿ 24 ಗಂಡು ಹಾಗೂ 17 ಹೆಣ್ಣು ಮಕ್ಕಳಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಕೃಪೆ:ವಿಜಯವಾಣಿ

ಕಾರಾಗೃಹಗಳಲ್ಲಿ ಇದ್ದಾರೆ 15,257 ಕೈದಿಗಳು ಎಂದು ಹೈಕೋರ್ಟ್​ಗೆ ಸರ್ಕಾರದ ಮಾಹಿತಿ: ನಿಗದಿತ ಪ್ರಮಾಣಕ್ಕಿಂತ ಶೇ.11 ಅಧಿಕ

Prisoners,Government, Information to the High Court,11% above