ಬೆಂಗಳೂರು,ಜೂ,17,2020(www.justkannada.in): ಸಾರ್ವಜನಿಕ ಹಿತಾಸಕ್ತಿ ಹೊಂದಿದ ಖಾಸಗಿ ಸಂಸ್ಥೆಗಳು ರೈತರ ಬದುಕನ್ನು ಹಸನು ಮಾಡುವ ಸತ್ಕಾರ್ಯದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಲು ಮುಂದಾಗಬೇಕೆಂದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸಲಹೆ ನೀಡಿದರು.
ಸಣ್ಣ ಹಿಡುವಳಿದಾರರಿಗೆ ಬಾಯರ್ ಕ್ರಾಪ್ ಸೈನ್ಸ್ ಲಿಮಿಟೆಡ್ ವತಿಯಿಂದ ಉತ್ತಮ ಗುಣಮಟ್ಟದ ಬೀಜಗಳನ್ನುಳ್ಳ ಉಚಿತ ಕಿಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸಣ್ಣ ಹಿಡುವಳಿದಾರರಿಗೆ ಬಾಯರ್ ಕ್ರಾಪ್ ಸೈನ್ಸ್ ಲಿಮಿಟೆಡ್ ವತಿಯಿಂದ ಉತ್ತಮ ಗುಣಮಟ್ಟದ ಬೀಜಗಳನ್ನುಳ್ಳ ಉಚಿತ ಕಿಟ್ ನೀಡಲು ಮುಂದಾಗಿರುವುದು ಸಂತಸದ ಸಂಗತಿ. ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಸಂತೋಷದಿಂದ ಚಾಲನೆ ನೀಡಿದ್ದೇನೆ. ಸಣ್ಣ ಹಿಡುವಳಿದಾರರಿಗೆ ಉತ್ತಮ ಕೃಷಿ ಕೈಗೊಳ್ಳಲು ಅನುಕೂಲವಾಗುವಂತಹ ಉತ್ತಮ ಬೀಜಗಳು, ಉತ್ತಮ ಬೆಳೆ ಬೆಳೆಯುವ ಆಧುನಿಕ ಕೃಷಿ ಪದ್ಧತಿಯ ಮಾಹಿತಿಯನ್ನೊಳಗೊಂಡ ಬಾಯರ್ ಕಿಟ್ಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್-19 ನಿಂದಾಗಿ ಇಡೀ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದ್ದು, ರಾಜ್ಯದ ಕೃಷಿಯ ಮೇಲೆಯೂ ತನ್ನ ಪ್ರಭಾವವನ್ನು ಬೀರುತ್ತಿದೆ. ರೈತರು ಹಾಗೂ ಸಣ್ಣ ಹಿಡುವಳಿದಾರರು ತಮ್ಮ ಬೆಳೆಗಳ ಕೊಯ್ಲೋತ್ತರ ಮತ್ತು ಕೃಷಿ ಭೂಮಿ ನಿರ್ವಹಣೆಗಾಗಿ ವಲಸೆ ಕಾರ್ಮಿಕರ ಮೇಲೆ ಅವಲಂಬಿತರಾಗಿದ್ದು, ಕೋವಿಡ್-19 ನ ಪರಿಸ್ಥಿತಿಯಲ್ಲಿ ತಮ್ಮ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾಗದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸನ್ನಿವೇಶದಲ್ಲಿ ರೈತರು ತಮ್ಮ ಕುಟುಂಬ, ಕೃಷಿ, ಪಶುಸಂಗೋಪನೆಗಳ ನಿರ್ವಹಣೆಯನ್ನು ನಡೆಸುವುದು ಕಷ್ಟವಾಗಿದೆ. ಕೋವಿಡ್-19ನ ಸಂಕಷ್ಟದಿಂದ ರಾಜ್ಯದ ಎಲ್ಲ ವರ್ಗದ ಜನರು ಹೊರಬರಲು ರಾಜ್ಯ ಸರ್ಕಾರ 2,284 ಕೋಟಿ ರೂ.ಗಳ ಪರಿಹಾರದ ಪ್ಯಾಕೇಜ್ನ್ನು ಘೋಷಿಸಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಎಲ್ಲ ರೀತಿಯ ಬೆಂಬಲ ನೀಡಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಿಷ್ಟು…
2020-21ನೇ ಸಾಲಿನಲ್ಲಿ 47.81 ಲಕ್ಷ ರೈತರಿಗೆ 2000 ರೂ.ಗಳಂತೆ ಒಟ್ಟು 956.32 ಕೋಟಿ ವರ್ಗಾಯಿಸಲಾಗಿದೆ. ಕೇಂದ್ರ ಸರ್ಕಾರದ ಪಿ.ಎಂ. ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ನೀಡುವ 4 ಸಾವಿರ ರೂ.ಗಳ ಪೈಕಿ 2 ಸಾವಿರ ರೂ.ಗಳ ಎರಡನೇ ಕಂತನ್ನು 50 ಲಕ್ಷ ರೈತರ ಖಾತೆಗೆ ಒಟ್ಟು 1,000 ಕೋಟಿ ರೂ. ಜಮೆ ಮಾಡಲಾಗುತ್ತಿದೆ.
ಕೊವೀಡ್-19ರ ಸಂದರ್ಭದಲ್ಲಿ ಸಂಕಷ್ಟಕೀಡಾಗಿರುವ ರೈತರಿಗೆ ಬೆಂಬಲ ನೀಡುವ ಸಲುವಾಗಿ 12,735 ಹೆಕ್ಟೇರ್ ವಿಸ್ತೀರ್ಣದಲ್ಲಿ ಹೂವುಗಳನ್ನು ಬೆಳೆದ ರೈತರಿಗೆ ಗರಿಷ್ಠ ಒಂದು ಹೆಕ್ಟೇರ್ಗೆ ರೂ. 25,000 ಗಳ ಪರಿಹಾರ ಘೋಷಿಸಲಾಗಿದೆ. ರೈತ ಸಂಪರ್ಕ ಕೇಂದ್ರ ಯಂತ್ರೋಪಕರಣಗಳ ಸೇವಾ ಕೇಂದ್ರ, ಕೃಷಿ ಪರಿಕರ ಮಾರಾಟ ಕೇಂದ್ರಗಳನ್ನು ತೆರೆಯುವ ಮೂಲಕ ಮುಂಗಾರು ಹಂಗಾಮಿನ ಚಟುವಟಿಕೆಗಳಿಗೆ ಪೂರಕ ವ್ಯವಸ್ಥೆ ಮಾಡಲಾಗಿದೆ.
ಹಾಪ್ಕಾಮ್ಸ್ ಮೂಲಕ ಹಣ್ಣು ತರಕಾರಿ ಮಾರಾಟಕ್ಕೆ ವ್ಯವಸ್ತೆ ಹಾಗೂ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಸಂಸ್ಥೆಯ ಈ ಉಪಕ್ರಮದಿಂದ ಸಣ್ಣ ರೈತರು ಕಡಿಮೆ ವೆಚ್ಚದಲ್ಲಿ ಉತ್ತಮ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಜೀವನ ಮಟ್ಟವನ್ನು ಸುಧಾರಿಸಲು ಅನುಕೂಲವಾಗಲಿದೆ.
ಸಾರ್ವಜನಿಕ ಹಿತಾಸಕ್ತಿ ಹೊಂದಿದ ಖಾಸಗಿ ಸಂಸ್ಥೆಗಳು ರೈತರ ಬದುಕನ್ನು ಹಸನು ಮಾಡುವ ಸತ್ಕಾರ್ಯದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಲು ಮುಂದಾಗಬೇಕೆಂದು ಆಶಿಸುತ್ತೇನೆ.
Key words: Private companies – join – government – farmers-CM BS Yeddyurappa