ಮೈಸೂರು,ಅಕ್ಟೋಬರ್,15,2020(www.justkannada.in) : ಸವಲತ್ತು ವಂಚಿತರಿಗೆ ಸಂವಿಧಾನದ ಸವಲತ್ತು ಸಿಗುತ್ತಿಲ್ಲ. ಇದು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ವಿಷಾದ ವ್ಯಕ್ತಪಡಿಸಿದರು.ಗುರುವಾರ ನಗರದ ಎಂಜಿನಿಯರ್ಸ್ ಸಭಾಂಗಣದಲ್ಲಿ ಬುಡಕಟ್ಟು ಮೂಲನಿವಾಸಿಗಳ ಜಾಗೃತ ವೇದಿಕೆ ಹಾಗೂ ಬುಡಕಟ್ಟು ಮೂಲನಿವಾಸಿಗಳ ಪುನಶ್ಚೇತನ ಸಮಿತಿ ವತಿಯಿಂದ ಆಯೋಜಿಸಿದ್ದ ‘ಬುಡಕಟ್ಟು ಮೂಲ ನಿವಾಸಿಗಳ ಬದುಕು ಬವಣೆ ಕುರಿತು ವಿಚಾರ ಮಂಥನ’ ಕಾರ್ಯಕ್ರಮವನ್ನು ಬಿರ್ಸಾಮುಂಡ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡುವ ಮೂಲಕ ಉದ್ಘಾಟಿಸಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿದರು.ಸಂವಿಧಾನ ಜಾರಿಯಾಗಿ 7 ದಶಕವಾದರೂ ಬುಡಕಟ್ಟು ಜನರಿಗೆ ಮೂಲಸೌಕರ್ಯವಿಲ್ಲ
ಡಾ.ಬಿ.ಆರ್.ಅಂಬೇಡ್ಕರ್ ಅವರು ಬುಡಕಟ್ಟು ಹಾಗೂ ಶೋಷಿತ ಸಮುದಾಯಗಳ ಪರಿಸ್ಥಿತಿ ಅರಿತಿದ್ದರು. ಹೀಗಾಗಿ, ಅವರ ಸಬಲೀಕರಣಕ್ಕಾಗಿ ಸಂವಿಧಾನದಲ್ಲಿ ಹಕ್ಕು ನೀಡಿದ್ದಾರೆ. ಆದರೆ, ಸಂವಿಧಾನ ಜಾರಿಗೆ ಬಂದು ಏಳು ದಶಕ ಕಳೆದರೂ ಬುಡಕಟ್ಟು ಜನರಿಗೆ ಮೂಲ ಸೌಕರ್ಯ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೀಸಲು ಸೌಲಭ್ಯ ಪಡೆದುಕೊಂಡು ಐಷರಾಮಿ ಜೀವನ
ಇತ್ತೀಚಿನ ದಿನಗಳಲ್ಲಿ ಮೀಸಲು ಸೌಲಭ್ಯ ಪಡೆದುಕೊಂಡು ಐಷರಾಮಿ ಜೀವನ ನಡೆಸುತ್ತಿರುವುದು ವಿಷಾದನೀಯ. ಬುಡಕಟ್ಟು ಮೂಲ ನಿವಾಸಿಗಳ ಬದುಕು ಬವಣೆ ಕುರಿತು ವಿಚಾರ ಮಂಥನ ನಡೆಸುತ್ತಿರುವುದು ಶ್ಲಾಘನೀಯ. ಇದು ಕಾರ್ಯಕ್ರಮಕ್ಕೆ ಸೀಮಿತವಾಗದೆ, ಇಲ್ಲಿ ನಡೆಯುವ ಚರ್ಚೆಗಳನ್ನು ಆಧಾರಿಸಿ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.ನಾಗರೀಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ ಪೊಲೀಸ್ ಅಧೀಕ್ಷಕಿ ಬಿ.ಟಿ.ಕವಿತಾ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕ್ಷೀರ ಸಾಗರ, ಪತ್ರಕರ್ತ ಕೆ.ದೀಪಕ್ ವಿಚಾರ ಮಂಡನೆ ಮಾಡಿದರು.
ಬುಡಕಟ್ಟು ಮೂಲನಿವಾಸಿಗಳ ಪುನಶ್ಚೇತನ ಸಮಿತಿಯ ಜಾಕೀರ್ ಹುಸೇನ್, ಸಮಾಜ ಸೇವಕ ಕೆ.ರಘುರಾಂ, ಕಸಾಪ ಮಾಜಿ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಮಡ್ಡೀಕೆರೆ ಗೋಪಾಲ್, ಬಸಪ್ಪ ಲಿಂಗಾಪುರ, ಎಸ್.ದಿವಾಕರ್, ಸಮಾಜ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಎಚ್.ಬೀರಪ್ಪ, ಮಾಲವಿಕ ಗುಬ್ಬಿವಾಣಿ, ಮಾನವ ಹಕ್ಕು ಹೋರಾಟಗಾರ ಪ್ರಸನ್ನ ಇತರರು ಹಾಜರಿದ್ದರು.
key words : privileged-deprived-constitutional-privilege-Prof. K.S.Rangappa