ಬೆಂಗಳೂರು,ಏಪ್ರಿಲ್,11,2023(www.justkannada.in): ಕರ್ನಾಟಕದ ಐದು ಜಿಲ್ಲೆಗಳ 865 ಹಳ್ಳಿ ಪಟ್ಟಣಗಳಲ್ಲಿ ಮಹಾತ್ಮಾ ಫುಲೆ ಜನಾರೋಗ್ಯ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕರ್ನಾಟಕದ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿರುವ ಮತ್ತು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಲು ಹೊರಟಿರುವ ಮಹಾರಾಷ್ಟ್ರ ಸರಕಾರಕ್ಕೆ ಕಡಿವಾಣ ಹಾಕಲು ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವದಾಗಿ ರಾಜ್ಯ ಗಡಿ ಸಂರಕ್ಷಣಾ ಮತ್ತು ಜಲ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲ ಮತ್ತು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಅವರು ಇಂದು ಮಂಗಳವಾರ ಭರವಸೆ ನೀಡಿದ್ದಾರೆ.
ಬೆಂಗಳೂರಿನ ಬಹುಮಹಡಿ ಕಟ್ಟಡದ ಗಡಿ ಸಂರಕ್ಷಣಾ ಆಯೋಗದ ಕಚೇರಿಯಲ್ಲಿ ನಡೆದ ಚರ್ಚೆಯ ವೇಳೆ ಇಬ್ಬರೂ ಅಧ್ಯಕ್ಷರಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು, ಮಹಾರಾಷ್ಟ್ರ ನಡೆಸುತ್ತಿರುವ ಹುನ್ನಾರವನ್ನು ಸಮಗ್ರವಾಗಿ ವಿವರಿಸಿದರಲ್ಲದೇ ಮನವಿ ಪತ್ರ ಮತ್ತು ಈ ಸಂಬಂಧದ ಪತ್ರಿಕಾ ವರದಿಗಳನ್ನು ಸಲ್ಲಿಸಿದರು.
ಕಳೆದ 19 ವರ್ಷಗಳಿಂದ ಸರ್ವೋನ್ನತ ನ್ಯಾಯಾಲಯದ ಮುಂದಿರುವ ಕರ್ನಾಟಕ- ಮಹಾರಾಷ್ಟ್ರ ಗಡಿವಿವಾದ ಪ್ರಕರಣದಲ್ಲಿ ಸಾಕ್ಷಿಯೊಂದನ್ನು ಸೃಷ್ಟಿಸಲು ಮಹಾರಾಷ್ಟ್ರ ಸರಕಾರವು ಈ ಆರೋಗ್ಯ ವಿಮೆ ಯೋಜನೆಯನ್ನು 54 ಕೋಟಿ ರೂ.ವೆಚ್ಚದಲ್ಲಿ ಜಾರಿಗೊಳಿಸಲು ಕಳೆದ ಮಾರ್ಚ 2 ರಂದು ಸಚಿವ ಸಂಪುಟದಲ್ಲಿ ನಿರ್ಧಾರಕೈಗೊಂಡಿದೆ. ಅದರಂತೆ ಇದೇ ಎಪ್ರಿಲ್ 3 ರಂದು ಅಧಿಕೃತ ಆದೇಶವನ್ನು ಹೊರಡಿಸಿದೆ.
865 ಹಳ್ಳಿ ಪಟ್ಟಣಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ದಾವೆ ದಾಖಲಿಸಿರುವ ಇವೇ ಹಳ್ಳಿಗಳಲ್ಲಿಯ ಮರಾಠಿಗರು ಮಹಾರಾಷ್ಟ್ರಕ್ಕೆ ಸೇರಬಯಸಿದ್ದಾರೆಂದು ದಾಖಲೆ ಸೃಷ್ಟಿಸಲು ಕುತಂತ್ರ ನಡೆಸಿದೆ. ಈ ಕ್ರಮವು ನ್ಯಾಯಾಂಗ ನಿಂದನೆಯಾಗಿದ್ದು ಸರ್ವೋನ್ನತ ನ್ಯಾಯಾಲಯದಲ್ಲಿ ಒಂದು ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಬೇಕು. ಅಲ್ಲದೇ ಆಡಳಿತಾತ್ಮಕ ಕ್ರಮಗಳ ಮೂಲಕ ಯೋಜನೆಯ ಜಾರಿಗೆ ತಡೆ ಹಾಕಬೇಕು ಎಂದು ಅಶೋಕ ಚಂದರಗಿ ಅವರು ಇಬ್ಬರೂ ಅಧ್ಯಕ್ಷರನ್ನು ಆಗ್ರಹಿಸಿದರು.
ಗಡಿವಿವಾದ ಪ್ರಕರಣದ ವಿಚಾರಣೆಯು ನಡೆದ ದಿನದಂದು ಮಹಾರಾಷ್ಟ್ರದ ಕ್ರಮವನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದೆಂದು ಶಿವರಾಜ ಪಾಟೀಲ ಅವರು ತಿಳಿಸಿದರು. 865 ಹಳ್ಳಿ ಪಟ್ಟಣಗಳಿರುವ ಐದು ಜಿಲ್ಲೆಗಳಾದ ಬೆಳಗಾವಿ, ಕಾರವಾರ, ಕಲಬುರ್ಗಿ, ಬೀದರ ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ ಯೋಜನೆಯ ಅನುಷ್ಠಾನವನ್ನು ತಡೆಗೆ ಕ್ರಮ ಕೈಕೊಳ್ಳುವ ಭರವಸೆಯನ್ನು ಡಾ.ಸಿ.ಸೋಮಶೇಖರ ಅವರು ನೀಡಿದರು.
ಗಡಿ ಪ್ರಾಧಿಕಾರದ ಕಾರ್ಯದರ್ಶಿ ಮತ್ತಿಹಳ್ಳಿ ಪ್ರಕಾಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Key words: promise – action – curb – Maharashtra -government – interfering – Karnataka administration.