ಆಸ್ತಿ ಕಬಳಿಕೆ ವಕ್ಫ್ ಬೋರ್ಡ್‌ ನ ಒಂದು ದಂಧೆ: ರೈತರ ತಲೆ ಮೇಲೆ ಸಿಎಂ ಟೋಪಿ ಹಾಕ್ತಾರೆ- ಆರ್.ಅಶೋಕ್ ಕಿಡಿ

ಬೆಂಗಳೂರು, ನವೆಂಬರ್‌ 4, 2024 (www.justkannada.in): ವಕ್ಫ್‌ ಮಂಡಳಿ ಭೂಮಿ ಕಬಳಿಸುತ್ತಿರುವುದು ರೈತರ ಪಾಲಿಗೆ ಮರಣಶಾಸನವಾಗಿದೆ. ಆದರೆ ಭೂ ಕಬಳಿಕೆಯ ಈ ಆಟ ನಡೆಯಲು ಹಿಂದೂಗಳು ಬಿಡುವುದಿಲ್ಲ. ಕೂಡಲೇ ಕಾಂಗ್ರೆಸ್‌ ಸರ್ಕಾರ ವಕ್ಫ್‌ ಕಾಯ್ದೆಯಲ್ಲಿ ಬದಲಾವಣೆ ತರಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್  ಆಗ್ರಹಿಸಿದರು.

ವಕ್ಫ್‌ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೆ.ಆರ್‌.ಪುರದಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರ್.ಅಶೋಕ್,  ಜಮೀನು ಕಬಳಿಸುವ ಮೂಲಕ ಅನ್ನದಾತರ ಕಣ್ಣಲ್ಲಿ ನೀರು ಬರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇವೆಲ್ಲಕ್ಕೂ ಸಚಿವ ಜಮೀರ್‌ ಅಹ್ಮದ್‌ ಕಾರಣ. ಹಿಂದೆ ಕೇಂದ್ರದ ಕಾಂಗ್ರೆಸ್‌ ಸರ್ಕಾರ ಮುಸ್ಲಿಮರನ್ನು ಓಲೈಸಲು ವಕ್ಫ್‌ ಬೋರ್ಡ್‌ಗೆ ಹೆಚ್ಚು ಅಧಿಕಾರ ನೀಡಿತು. ಸಿಎಂ ಸಿದ್ದರಾಮಯ್ಯ ಅವರೇ ಭೂಮಿ ಪಡೆಯಿರಿ ಎಂದು ಹೇಳಿದ್ದು, ಈಗ ಇದು ಬಿಜೆಪಿ ಮಾಡುವ ರಾಜಕೀಯ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರು ಈಗ ಟೋಪಿ ತೆಗೆದಿದ್ದಾರೆ. ಬಳಿಕ ಅವರೇ ರೈತರ ತಲೆ ಮೇಲೆ ಟೋಪಿ ಹಾಕುತ್ತಾರೆ. ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ನೀಡುತ್ತೇನೆಂದು ಹೇಳಿ ದಲಿತರ ಹಣ ಲೂಟಿ ಮಾಡಿದ್ದಾರೆ. ಕಾಂಗ್ರೆಸ್‌ ಗೆ ಹಿಂದೂಗಳು ಮತ ನೀಡಿಲ್ಲವೇ? ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳೇ? ಎಂದು ಪ್ರಶ್ನಿಸಿದರು.

ಬಾಬರ್‌, ಔರಂಗಜೇಬ ಮೊದಲಾದ ಮತಾಂಧ ರಾಜರು ವಕ್ಫ್‌ ಬೋರ್ಡ್‌ಗೆ ಮಾದರಿ. ಶ್ರೀರಂಗಪಟ್ಟಣದಲ್ಲಿ ನೂರಾರು ವರ್ಷಗಳಿಂದ ಇರುವ ದೇವಸ್ಥಾನವನ್ನು ಖಬರ್‌ ಸ್ಥಾನ ಎಂದು ದಾಖಲೆಯಲ್ಲಿ ಬರೆಸಿದ್ದಾರೆ. ಲವ್‌ ಜಿಹಾದ್‌ ಮಾಡಿ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರ ಮಾಡಲಾಗಿದೆ. ಈಗ ಲ್ಯಾಂಡ್‌ ಜಿಹಾದ್‌ ಮೂಲಕ ರೈತರ ಜಮೀನು ಪರಿವರ್ತನೆ ಮಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ ನ ಮಗುವಿನಂತೆ ನಿದ್ರಿಸಿ ಎಂಬ ಘೋಷಣೆಯಂತೆ, ಭಯೋತ್ಪಾದಕರು ಹಾಗೂ ಮೂಲಭೂತವಾದಿಗಳು ಕರ್ನಾಟಕದಲ್ಲಿ ಮಗುವಿನಂತೆ ಆರಾಮಾಗಿ ನಿದ್ರಿಸಬಹುದು. ಭಯೋತ್ಪಾದಕರು ಡಿ.ಕೆ.ಶಿವಕುಮಾರ್‌ ಅವರ ಸಹೋದರರಾಗಿದ್ದಾರೆ. ಭಯೋತ್ಪಾದನೆ ಮಾಡಿದವರನ್ನು ನಮ್ಮವರು ಎಂದು ಹೇಳುತ್ತಿದ್ದಾರೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ನಂಬಿಕೆ ಉಳಿಸಿಕೊಳ್ಳದ ಮುಖ್ಯಮಂತ್ರಿ ನಮ್ಮ ರಾಜ್ಯದಲ್ಲಿದ್ದಾರೆ. ಮುಸ್ಲಿಂ ಗಲಭೆಕೋರರ ಕೇಸುಗಳನ್ನು ವಾಪಸ್‌ ಪಡೆದರು. ಗಣೇಶ ಮೂರ್ತಿಯನ್ನೇ ಬಂಧನ ಮಾಡಿದರು. ಕೇವಲ ಮತಕ್ಕಾಗಿ ಇಡೀ ಕರ್ನಾಟಕವನ್ನೇ ಹಾಳು ಮಾಡುತ್ತಿದ್ದಾರೆ. ಮುಡಾ ಹಗರಣವಾದ ನಂತರ ಸಿಎಂ ಸಿದ್ದರಾಮಯ್ಯನವರ ಹಣೆಯಲ್ಲಿ ಕುಂಕುಮ ಕಾಣಿಸಿಕೊಂಡಿದೆ ಎಂದು ಟೀಕಿಸಿದರು.

ಕಾಯ್ದೆಯಲ್ಲಿ ಬದಲಾವಣೆ ತನ್ನಿ

ವಕ್ಫ್‌ ಬೋರ್ಡ್‌ ಈಗ ಸಾಬರ ಬೋರ್ಡ್‌ ಆಗಿದ್ದು, ಸಿಎಂ ಸಿದ್ದರಾಮಯ್ಯನವರು ಬೇಕಿದ್ದರೆ ಎಲ್ಲ ಭೂಮಿಯನ್ನು ಈ ಬೋರ್ಡ್‌ಗೆ ಬರೆದುಬಿಡಬಹುದು. ಇವೆಲ್ಲ ದಾನ ಕೊಟ್ಟ ಜಮೀನು ಎಂದು ವಕ್ಫ್‌ ಮಂಡಳಿ ಹೇಳುತ್ತಿದೆ. ಮುಜರಾಯಿ ಇಲಾಖೆಗೂ ದಾನದಿಂದ ಭೂಮಿ ಬಂದಿದೆ. ಆದರೆ ಅದು ಮಾತ್ರ ಸರ್ಕಾರಿ ಆಸ್ತಿಯಾಗುತ್ತದೆ. ಆದರೆ ವಕ್ಫ್‌ ಬೋರ್ಡ್‌ಗೆ ದಾನದಿಂದ ಬರುವ ಭೂಮಿ ಮಾತ್ರ ಸರ್ಕಾರಿ ಆಸ್ತಿಯಾಗುವುದಿಲ್ಲ. ಹೀಗೆಯೇ ಕಾಂಗ್ರೆಸ್‌ ರಾಜ್ಯವನ್ನು ಹಾಳು ಮಾಡಿದರೆ ಹಿಂದೂಗಳು ಈ ಆಟ ನಡೆಯಲು ಬಿಡುವುದಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಕಾಯ್ದೆಯಲ್ಲಿ ಬದಲಾವಣೆ ಮಾಡಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಯ ಮಾತನ್ನು ನಂಬಲ್ಲ

ಸಿದ್ದರಾಮಯ್ಯನವರ ಮಾತನ್ನು ಯಾರೂ ನಂಬುವುದಿಲ್ಲ. ಅವರು ಯಾವಾಗ ಬೇಕಾದರೂ ಮಾತು ಬದಲಿಸುತ್ತಾರೆ. ರೈತರಿಗೆ ಸಂಪೂರ್ಣವಾಗಿ ಜಮೀನಿನ ದಾಖಲೆಗಳು ಸಿಕ್ಕಿ, ಅವರ ಹೆಸರಿಗೆ ಜಮೀನು ಸಂಪೂರ್ಣವಾಗಿ ನೋಂದಣಿಯಾಗುವವರೆಗೂ ಬಿಜೆಪಿ ಹೋರಾಟ ಮಾಡಲಿದೆ. ವಕ್ಫ್‌ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಗೆ ಈ ಕುರಿತು ಪತ್ರ ಬರೆದಿದ್ದೇನೆ. ಈ ಸಮಿತಿ ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ವಕ್ಫ್‌ ಬೋರ್ಡ್‌ ಆಸ್ತಿ ಕಬಳಿಕೆ ಒಂದು ದಂಧೆಯಾಗಿದ್ದು, ಇದನ್ನು ಮಟ್ಟ ಹಾಕಬೇಕಿದೆ ಎಂದರು.

Key words: Property, Expropriation, Waqf Board, scam, R.Ashok