ಬೆಂಗಳೂರು,ಡಿಸೆಂಬರ್,17,2024 (www.justkannada.in): ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಇ-ಖಾತಾ ಕಡ್ಡಾಯಗೊಳಿಸಿರುವುದನ್ನು ತೆರವು ಮಾಡಲು ಕೋರಿ ಪಿಐಎಲ್ ಸಲ್ಲಿಕೆಯಾಗಿದ್ದು ಇ-ಖಾತಾ ಕಡ್ಡಾಯಗೊಳಿಸಿರುವ ಕುರಿತು ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಆಸ್ತಿಗಳ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿರುವುದನ್ನು ಆಕ್ಷೇಪಿಸಿ ಬೆಂಗಳೂರಿನ ನಿವಾಸಿ ಗೌರಿಶಂಕರ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಕೆ ಮಾಡಿದ್ದು ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾ. ಕೆ.ವಿ. ಅರವಿಂದ ಅವರಿದ್ದ ವಿಭಾಗೀಯ ನ್ಯಾಯಪೀಠವು, ಎಲ್ಲ ಬಗೆಯ ಆಸ್ತಿಗಳ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿರುವ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಎಲ್ಲ ಬಗೆಯ ಆಸ್ತಿಗಳ ನೋಂದಣಿಗೆ ಇ-ಖಾತೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಬಿಬಿಎಂಪಿ ಈ ಬಗ್ಗೆ ಸಿದ್ಧತೆ ನಡೆಸಿಲ್ಲ. ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಎಲ್ಲ ಆಸ್ತಿಗಳಿಗೆ ಇ-ಖಾತಾ ಆಗಿಲ್ಲ. ಇದರಿಂದ ಆಸ್ತಿಗಳ ನೋಂದಣಿಯಲ್ಲಿ ಶೇಕಡಾ 60ರಷ್ಟು ಕುಸಿತ ಕಂಡುಬಂದಿದೆ. ಅಲ್ಲದೆ ಇ-ಖಾತಾ ಕಡ್ಡಾಯ ಆಗಿರುವುದರಿಂದ ಆಸ್ತಿಗಳ ಮಾರಾಟ, ಪರಭಾರೆ ಹಾಗೂ ಸಾಲದ ಮೇಲೆ ಋಣ ಕರಾರು ಮೊದಲಾದ ಕ್ರಯ-ವಿಕ್ರಯಕ್ಕೆ ಸಮಸ್ಯೆಯಾಗಿದ್ದು, ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಹೀಗಾಗಿ ಈ ವಿಚಾರವನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಎಲ್ಲ ಆಸ್ತಿಗಳಿಗೆ ಇ-ಖಾತಾ ಆಗುವವರೆಗೆ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸದಂತೆ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠವು, ಈ ಬಗ್ಗೆ ಸರ್ಕಾರದ ಪರವಾಗಿ ವಿವರಣೆ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ಫೆಬ್ರವರಿ 3ಕ್ಕೆ ಪ್ರಕರಣದ ವಿಚಾರಣೆಯನ್ನ ಮುಂದೂಡಿಕೆ ಮಾಡಿತು.
ಕೃಪೆ
ಲಾಗೈಡ್ ಕಾನೂನು ಮಾಸ ಪತ್ರಿಕೆ
ಮೈಸೂರು
key words: E-khata, mandatory, property registration, High Court