ಭಾಷ್ಯಂ ವೃತ್ತದ ಬಳಿ ವಾಹನದಟ್ಟಣೆಯನ್ನು ಕಡಿಮೆಗೊಳಿಸಲು ನಾಲ್ಕು-ಪಥಗಳ ಫ್ಲೈಓವರ್ ನಿರ್ಮಾಣದ ಪ್ರಸ್ತಾಪ.

 

ಬೆಂಗಳೂರು, ಜುಲೈ 20, 2021 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಸದಾಶಿವನಗರದ ಭಾಷ್ಯಂ ವೃತ್ತ ಹಾಗೂ ಸ್ಯಾಂಕಿ ರಸ್ತೆಯ ನಡುವೆ ವಾಹನ ಸಂಚಾರದಟ್ಟಣೆಯನ್ನು ಕಡಿಮೆಗೊಳಿಸಲು ನಾಲ್ಕು-ಪಥಗಳ ಮೇಲ್ಸೇತುವೆ ನಿರ್ಮಿಸಲು ಆಲೋಚಿಸಿದೆ.jk

ಪ್ರಸ್ತುತ ಈ ಯೋಜನೆಯ ಸಾಧ್ಯಾಸಾಧ್ಯತೆಗಳ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಈ ದಾರಿಯಲ್ಲಿ ಕೇವಲ ಮೂರು ಆಸ್ತಿಗಳನ್ನು ವಶಪಡಿಸಿಕೊಳ್ಳುವ ಮೂಲಕ ರಸ್ತೆಯನ್ನು ಅಗಲೀಕರಣಗೊಳಿಸಿ ಮೇಲ್ಸೇತುವೆಯೊಂದಿಗೆ ಏಕೀಕರಣಗೊಳಿಸಬಹುದು ಎಂಬ ವಿಶ್ವಾಸ ಬಿಬಿಎಂಪಿ ಹೊಂದಿದೆ.

ಈ ಯೋಜನೆಯಡಿ ರಸ್ತೆ ಅಗಲೀಕರಣದ ಜೊತೆಗೆ ಒಂದು ಗ್ರೇಡ್ ಸೆಪರೇಟರ್ ನಿರ್ಮಾಣವೂ ಮಾಡಬೇಕಿದೆ. ಈ ಪ್ರದೇಶ ಸ್ಯಾಂಕಿ ಕೆರೆಯ ಬಫರ್ ವ್ಯಾಪ್ತಿಗೆ ಬರುವ ಕಾರಣದಿಂದಾಗಿ ಈ ಯೋಜನೆ ಕೈಗೊಳ್ಳಲು ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಕೆಟಿಸಿಡಿಎ) ಅನುಮೋದನೆ ಪಡೆಯುವ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಯೋಜನೆಯ ಪ್ರಕಾರ, ಮಲ್ಲೇಶ್ವರಂ ೧೮ನೇ ತಿರುವು ಹಾಗೂ ಭಾಷ್ಯಂ ವೃತ್ತದ ನಡುವಿನ ರಸ್ತೆಯನ್ನು ಅಗಲೀಕರಣಗೊಳಿಸುವ ಅಗತ್ಯವಿದೆ. ಈ ರಸ್ತೆ ಕೆರೆ ದಂಡೆಯ ಪಕ್ಕದಲ್ಲಿದೆ. ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಪ್ರಸ್ತಾಪಿತ ಮೇಲ್ಸೇತುವೆ ಕಾವೇರಿ ಚಿತ್ರಮಂದಿರ ಹಾಗೂ ಯಶವಂತಪುರ ನಡುವಿನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವುದರ ಜೊತೆಗೆ, ವಾಹನಚಾಲಕರಿಗೆ ವೃತ್ತದ ಬಳಿ ಸಿಗ್ನಲ್ ಅನ್ನು ತಪ್ಪಿಸಲಿದೆ.

ಕೆರೆಯ ಎದುರುಗಡೆ ಇರುವ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಮೂಲಕ ಎರಡು ಹೊಸ ರಸ್ತೆಗಳನ್ನು ಸೇರ್ಪಡೆಗೊಳಿಸಲು ಯೋಜಿಸಲಾಗುತ್ತಿದೆ. “ಅಲ್ಲಿ ಮನೆಗಳು, ಶಾಲೆಗಳು ಹಾಗೂ ಪಾರ್ಟಿ ಕಚೇರಿಯ ಜೊತೆಗೆ ಹಲವು ಕಟ್ಟಡಗಳಿವೆ. ಈ ಎರಡು ಹೊಸ ರಸ್ತೆಗಳಿಗಾಗಿ ಅಲ್ಲಿರುವ ಮೂರು ಮನೆಗಳನ್ನು ತೆರವುಗೊಳಿಸಬೇಕಾಗಬಹುದು. ಉಳಿದ ಕಟ್ಟಡಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ,” ಎನ್ನುತ್ತಾರೆ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು.

ಈ ಯೋಜನೆಯನ್ನು ಎರಡು ದಶಕಗಳ ಹಿಂದೆಯೇ ಪ್ರಸ್ತಾಪಿಸಲಾಗಿತ್ತು. ಆದರೆ ರಾಜ್ಯದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್‌ ನಾರಾಯಣ ಅವರ ಅಡಳಿತದಡಿ ಇದಕ್ಕೆ ಮರುಜೀವ ಲಭಿಸಿದೆ. ನಗರಾಭಿವೃದ್ಧಿ ಇಲಾಖೆಯು ಈ ಯೋಜನೆಗಾಗಿ ನವ ನಗರೋತ್ಥಾನ ಅನುದಾನದಡಿ ರೂ.೩೫ ಕೋಟಿ ಮೊತ್ತವನ್ನು ಹಂಚಿಕೆ ಮಾಡಿರುವುದಾಗಿ ತಿಳಿದು ಬಂದಿದೆ. ಇತ್ತೀಚೆಗೆ ಉಪಮುಖ್ಯಮಂತ್ರಿಗಳು ಬಿಬಿಎಂಪಿ ಅಧಿಕಾರಿಗಳೊಂದಿಗೆ ಈ ಯೋಜನೆಯನ್ನು ಅಂತಿಮಗೊಳಿಸಿ ಸಾಧ್ಯವಾದಷ್ಟು ಬೇಗ ಕಾಮಗಾರಿ ಆರಂಭಿಸಲು ಸಭೆಯೊಂದನ್ನು ಈಗಾಗಲೇ ನಡೆಸಿದ್ದಾರೆ.

ಫ್ರೆಂಡ್ಸ್ ಆಫ್ ಲೇಕ್ಸ್ ನ ಸಂಯೋಜಕ ವಿ. ರಾಮ್‌ ಪ್ರಸಾದ್ ಅವರು, ಈ ಸ್ಥಳ ಕೆರೆ ದಂಡೆಯ ಪಕ್ಕದಲ್ಲಿರುವ ಕಾರಣದಿಂದಾಗಿ ಬಿಬಿಎಂಪಿ ಈ ಯೋಜನೆಯ ವಿವರವಾದ ಯೋಜನಾ ವರದಿಯನ್ನು ವಾಹನ ಸಂಚಾರ ತಜ್ಞರು ಹಾಗೂ ಪರಿಸರ ತಜ್ಞರೊಂದಿಗೆ ಚರ್ಚಿಸದ ನಂತರ ಸಿದ್ಧಪಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಕೇವಲ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಸಾಕಾಗುವುದಿಲ್ಲ. ವಾಹನ ಚಾಲಕರು ಮುಂದೆ ಬರುವ ಸಂಚಾರ ಸಿಗ್ನಲ್‌ ನಲ್ಲಿ ಈಗಿರುವುದಕ್ಕಿಂತ ಹೆಚ್ಚಿನ ಸಮಯ ಕಾಯಬೇಕಾಗಬಹುದು. ಕೇವಲ ಸ್ಯಾಂಕಿ ರಸ್ತೆಯಷ್ಟೇ ಕಿರಿದಾಗಿಲ್ಲ. ಅರಣ್ಯ ಭವನದ ಮುಂಭಾಗದ ರಸ್ತೆಯೂ ಒಳಗೊಂಡಂತೆ ಕೆರೆಯ ಸುತ್ತಲೂ ಇರುವ ಅನೇಕ ರಸ್ತೆಗಳ ಪರಿಸ್ಥಿತಿಯೂ ಇದೇ ರೀತಿಯಿದೆ. ಕೇವಲ ಸಾಧ್ಯಾಸಾಧ್ಯತೆಯನ್ನು ಪರಿಗಣಿಸಿ ರಸ್ತೆಗಳನ್ನು ಅಗಲೀಕರಣಗೊಳಿಸಬಾರದು. ಒಟ್ಟಾರೆ ಇಡೀ ಪ್ರದೇಶದ ವಾಹನದಟ್ಟಣೆಯನ್ನು ವಿಶ್ಲೇಷಿಸಿ ಪರಿಗಣಿಸಬೇಕು,” ಎನ್ನುವುದು ಅವರ ಅಭಿಪ್ರಾಯ.

Key words: Proposal – four-lane- flyover -construction –reduce- traffic -bngalore