ಬೆಂಗಳೂರು, ನವೆಂಬರ್ 16, 2022 (www.justkannada.in): ಬೆಂಗಳೂರು ಮಹಾನಗರದ ಅಂದಿನ ಜನಪ್ರಿಯ ಸಂಗೀತ ಕಾರಂಜಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿ ಒಂದು ದಶಕಕ್ಕಿಂತಲೂ ಹೆಚ್ಚಿನ ಸಮಯವಾಗಿದೆ. ಹಲವು ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರುವವರಿಗೆ ಕೃಷ್ಣರಾಜಸಾಗರದ ಅತ್ಯಂತ ದೊಡ್ಡ ಜನಪ್ರಿಯತೆಯನ್ನು ಪಡೆದಂತಹ ಬೃಂದಾವನ ಉದ್ಯಾನವನದಲ್ಲಿರುವ ಸಂಗೀತ ಕಾರಂಜಿಯ ಬಗ್ಗೆ ತಿಳಿದೇ ಇರುತ್ತದೆ. ಬೆಂಗಳೂರಿಗರು ಒಂದು ಕಾಲದಲ್ಲಿ ಅಲ್ಲಿನ ಸಂಗೀತ ಕಾರಂಜಿಯನ್ನು ನೋಡಲು ಇಲ್ಲಿಂದ ಮಂಡ್ಯದಲ್ಲಿರುವ ಬೃಂದಾವನ ಉದ್ಯಾನವನಕ್ಕೆ ತೆರಳುತ್ತಿದ್ದರು.
ಹಾಗಾಗಿ, ಸಂಬಂಧಪಟ್ಟ ಪ್ರಾಧಿಕಾರಗಳು ನಮ್ಮ ಬೆಂಗಳೂರಿನಲ್ಲಿಯೂ ಅದೇ ರೀತಿಯ ಒಂದು ಸಂಗೀತ ಕಾರಂಜಿಯನ್ನು ಸ್ಥಾಪಿಸಲು ನಿರ್ಧರಿಸಿದರು. ಇದರ ಫಲವಾಗಿ ೧೯೯೪ರಲ್ಲಿ ಬೆಂಗಳೂರಿನ ಇಂದಿರಾ ಗಾಂಧಿ ಸಂಗೀತ ಕಾರಂಜಿ ಅಸ್ತಿತ್ವಕ್ಕೆ ಬಂತು. ಈ ಕಾರಂಜಿ ೬೦ ಅಡಿ ಉದ್ದ ಹಾಗೂ ೧೫ ಅಡಿ ಅಗಲವಿದೆ. ಈ ಕಾರಂಜಿಯೂ ಸಹ ಬೆಂಗಳೂರಿಗರ ಪೈಕಿ ದೊಡ್ಡ ಹಟ್ ಆಗಿತ್ತು. ಆದರೆ ೨೦೧೨ರಲ್ಲಿ ಈ ಕಾರಂಜಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು. ಅಂದಿನಿಂದ ಇದನ್ನು ಸರಿಪಡಿಸಲಾಗಿಲ್ಲ.
ಜೊತೆಗೆ, ಇಲ್ಲಿ ಒಂದು ಪುಟಾಣಿ ರೈಲು (ಟಾಯ್ ಟ್ರೇನ್) ಸಹ ಇದ್ದು, ಇದೂ ಸಹ ಈ ಉದ್ಯಾನವನದ ಮುಖ್ಯ ಆಕರ್ಷಣೆಯಾಗಿತ್ತು. ಆದರೆ ಈ ಪುಟಾಣಿ ರೈಲು ಸಹ ಕೆಟ್ಟು ನಿಂತಿದೆ. ಈ ಸಂಬಂಧ ಮಾತನಾಡಿದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ಪುಟಾಣಿ ರೈಲನ್ನು ದುರಸ್ತಿಗೊಳಿಸಲು ಹಣ ಸಹಾಯ ನೀಡುವಂತೆ ಹಲವು ಬಾರಿ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದು, ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ ಎಂದು ತಿಳಿಸಿದ್ದಾರೆ. ಆದರೆ ಸಾಧ್ಯವಾದಷ್ಟು ಬೇಗ ಈ ಪುಟಾಣಿ ರೈಲಿನ ದುರಸ್ತಿ ಮುಗಿದು ಮತ್ತೊಮ್ಮೆ ಹಳಿಗಳ ಮೇಲೆ ಓಡಲಾರಂಭಿಸುವ ವಿಶ್ವಾಸವಿದೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಈಗ ಸಂಬಂಧಪಟ್ಟ ಪ್ರಾಧಿಕಾರಗಳು ಹೇಳುತ್ತಿರುವುದೇನೆಂದರೆ ಸಂಗೀತ ಕಾರಂಜಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿ ಒಂದು ದಶಕಕ್ಕಿಂತಲೂ ಹೆಚ್ಚಿನ ಸಮಯವಾಗಿದ್ದು, ನೀರು ಶೇಖರಣಾ ತೊಟ್ಟಿಗಳು ಸೇರಿದಂತೆ ಬಹುತೇಕ ಎಲ್ಲವನ್ನೂ ದುರಸ್ತಿಪಡಿಸಬೇಕಿದೆ. ಆದರೆ ತೋಟಗಾರಿಕೆ ಇಲಾಖೆಯಲ್ಲಿ ಹಣವಿಲ್ಲದಿರುವುದೇ ಇರುವುದರಿಂದಾಗಿ ಸಂಗೀತ ಕಾರಂಜಿ ಹಾಗೂ ಇತರೆ ವ್ಯವಸ್ಥೆಗಳನ್ನು ಸರಿಪಿಡಸಲು ಸಿಎಸ್ ಆರ್ ನಿಧಿಯನ್ನು ಎದುರು ನೋಡುತ್ತಿದೆಯಂತೆ.
ಮೂಲಗಳ ಪ್ರಕಾರ, ಈ ಸಂಗೀತ ಕಾರಂಜಿ ಇರುವ ಉದ್ಯಾನವನ, ತಾರಾಲಯ, ಬಾಲ ಭವನ ಹಾಗೂ ಕಬ್ಬನ್ ಉದ್ಯಾನವನಗಳಿಗೆ ಹತ್ತಿರವಿರುವ ಕಾರಣದಿಂದಾಗಿ ಇಲ್ಲಿನ ಸಂಗೀತ ಕಾರಂಜಿ ಮಕ್ಕಳಲ್ಲಿ ಬಹಳ ಖ್ಯಾತಿಯನ್ನು ಗಳಿಸಿತ್ತು. ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಮಕ್ಕಳು ಇಲ್ಲಿಗೆ ಬರುತ್ತಿದ್ದರು. ಈ ಸಂಗೀತ ಕಾರಂಜಿ ಈ ಹಿಂದೆ ವಾರದಲ್ಲಿ ಆರು ದಿನಗಳ ಕಾಲ ಪ್ರತಿ ದನ ಎರಡು ಪ್ರದರ್ಶನಗಳನ್ನು ಒಳಗೊಂಡಿತ್ತು (ರಾತ್ರಿ ೭-೭.೩೦ ಹಾಗೂ ೮ ರಿಂದ ೮.೩೦ ರವರೆಗೆ).
ಈ ಸಂಬಂಧ ಮಾತನಾಡಿದ ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು, “ನಾವು ರಾಜ್ಯ ಸರ್ಕಾರಕ್ಕೆ ಇಲ್ಲಿನ ಮೂಲಭೂತಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅನುದಾನ ಒದಗಿಸಬೇಕೆಂದು ಕೋರಿ ವಿವರವಾದ ವರದಿಯೊಂದನ್ನು ಸಲ್ಲಿಸಿದ್ದೆವು. ವಾಸ್ತವದಲ್ಲಿ ಸರ್ಕಾರವೂ ಸಹ ೨೦೧೫ರಲ್ಲಿ ರಾಜ್ಯ ಆಯವ್ಯಯದಲ್ಲಿ ಇದಕ್ಕಾಗಿ ಹಣ ಒದಗಿಸುವುದಾಗಿ ಆಶ್ವಾಸನೆಯನ್ನೂ ನೀಡಿತ್ತು. ಆದರೆ ಅದು ಕೇವಲ ಆಶ್ವಾಸನೆಯಾಗಿಯೇ ಉಳಿದುಕೊಂಡಿದ್ದು, ಹಣ ಬಿಡುಗಡೆ ಆಗಲೇ ಇಲ್ಲ. ಅಂದಿನಿಂದ ನಾವು ಹಣಕಾಸು ಇಲಾಖೆಗೆ ಹಲವು ಬಾರಿ ಹಣ ಬಿಡುಗಡೆಗೊಳಿಸುವಂತೆ ಕೋರಿ ಪತ್ರಗಳನ್ನು ಬರೆದಿದ್ದೇವೆ. ಆದರೆ ಇಲ್ಲಿಯವರೆಗೆ ಅದೃಷ್ಟ ಬಂದಿಲ್ಲ. ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಸಿಂಗಪೂರ್ ನ ಒಂದು ಕಂಪನಿಯನ್ನು ಗುರುತಿಸಲಾಗಿತ್ತು. ಇಡೀ ಸಂಗೀತ ಕಾರಂಜಿ ವ್ಯವಸ್ಥೆಯನ್ನು ದುರಸ್ತಿಗೊಳಿಸಲು ರೂ.೧೬ ಕೋಟಿ ಅಗತ್ಯವಿದೆ. ಜೊತೆಗೆ ನಾವು ಇಲ್ಲಿ ಲೇಸರ್ ಪ್ರದರ್ಶನವನ್ನೂ ಸಹ ಏರ್ಪಡಿಸಲು ಯೋಜಿಸಿದ್ದೇವೆ. ಆದರೆ ರಾಜ್ಯ ಹಣಕಾಸು ಇಲಾಖೆಯವರು ಕೇವಲ ರೂ.೨ ಕೋಟಿ ನೀಡುವುದಾಗಿ ತಿಳಿಸಿತು, ಇದು ಯಾವುದಕ್ಕೂ ಸಾಲುವುದಿಲ್ಲ,” ಎಂದು ವಿವರಿಸಿದರು.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಹೆಚ್.ಟಿ. ಬಾಲಕೃಷ್ಣ ಅವರು ಹೇಳಿದಂತೆ ಈ ಉದ್ಯಾನವನದ ಪುನರ್ ಅಭಿವೃದ್ಧಿಗಾಗಿ ಕನಿಷ್ಠ ರೂ. ೧೦ ರಿಂದ ರೂ.೧೨ ಕೋಟಿಗಳ ಅಗತ್ಯವಿದೆ. ಆದರೆ ಇಲಾಖೆಯ ಬಳಿ ಅಷ್ಟು ಹಣ ಇಲ್ಲದಿರುವ ಕಾರಣದಿಂದಾಗಿ ವಿವಿಧ ಕಾರ್ಪೊರೇಟ್ ಸಂಸ್ಥೆಗಳ ಮೊರೆ ಹೋಗಿದ್ದಾರಂತೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: proposal – restore – music -fountain – Bangalore.