ಬೆಂಗಳೂರು, ಜುಲೈ,4,2022(www.justkannada.in): ‘ಪ್ರತಿಯೊಬ್ಬರೊಳಗೂ ತಾಯ್ತನವಿದ್ದರೆ ಅದು ಸಮಾಜವನ್ನು ಆರೋಗ್ಯವಾಗಿರಿಸಬಲ್ಲದು’ ಎಂದು ಖ್ಯಾತ ವಿಚಾರವಾದಿ ಡಾ ವಿಜಯಾ ಅಭಿಪ್ರಾಯಪಟ್ಟರು.
‘ಬಹುರೂಪಿ’ ಪ್ರಕಾಶನ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿರುಚಿತ್ರ ನಿರ್ದೇಶಕ ಜಯರಾಮಾಚಾರಿ ಅವರ ಕೃತಿ ‘ನನ್ನವ್ವನ ಬಯೋಗ್ರಫಿ’ ಬಿಡುಗಡೆ ಮಾಡಿ ಮಾತನಾಡಿದರು.
ತಾಯ್ತನ ಎನ್ನುವುದು ಕಳೆದುಹೋಗುತ್ತಿರುವ ಕಾರಣಕ್ಕಾಗಿಯೇ ಸಮಾಜದಲ್ಲಿ ಬಿಕ್ಕಟ್ಟುಗಳು ಹೆಚ್ಚುತ್ತಿವೆ. ಒಂದು ತಾಯ್ತನದ ಗುಣ ಏನು ಎನ್ನುವುದನ್ನು ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಒಬ್ಬ ತಾಯಿ ತನ್ನನ್ನು ಕಷ್ಟಕ್ಕೆ ಒಡ್ಡಿಕೊಂಡೇ ಕುಟುಂಬದ ಸ್ವಾಸ್ಥ್ಯವನ್ನು ಕಾಪಾಡಲು ಮುಖ್ಯ ಕಾರಣಳಾಗುತ್ತಾಳೆ. ಅಂತಹ ತಾಯ್ತನವನ್ನು ಕಾಪಾಡೋಣ ಎಂದರು.
ಕಲಬುರ್ಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ ಅವರು ಮಾತನಾಡಿ ರಂಗಭೂಮಿ ಎಲ್ಲರ ಹೃದಯಕ್ಕೆ ಹತ್ತಿರವಾಗುವುದೇ ಅದರ ತಾಯ್ತನದ ಗುಣದಿಂದ. ಹಾಗಾಗಿ ರಂಗಭೂಮಿ ಎಲ್ಲರಿಗೂ ಅತ್ಯಂತ ಇಷ್ಟವಾಗುತ್ತದೆ ಎಂದರು.
ಹಿರಿಯ ಪತ್ರಕರ್ತ, ಲೇಖಕ ಎ ಆರ್ ಮಣಿಕಾಂತ್ ಅವರು ಮಾತನಾಡಿ, ನನ್ನ ತಾಯಿಯ ಅನುಭವ ಲೋಕವೇ ನನ್ನೊಳಗಿನ ಭಾವಕೋಶ ಹಾಗಾಗಿಯೇ ಬರವಣಿಗೆಯಲ್ಲಿ ನಾನು ಭಾವುಕನಾಗಲು ಸಾಧ್ಯವಾಯಿತು. ನನ್ನವ್ವನ ಬಯೋಗ್ರಫಿ ಎಲ್ಲರ ಅಮ್ಮನ ಬಯೋಗ್ರಾಫಿಯಾಗಿದೆ ಎಂದರು.
ಹಿರಿಯ ಪತ್ರಕರ್ತ, ಲೇಖಕ ಜಿ ಎನ್ ಮೋಹನ್ ಅವರು ಮಾತನಾಡಿ ತಾಯಂದಿರನ್ನು ಗೌರವಿಸುವ, ಪ್ರೀತಿಸುವ ಎಲ್ಲಾ ಮನಸ್ಸುಗಳಿಗಾಗಿ ಪ್ರತೀ ವರ್ಷ ತಾಯಿಯನ್ನು ಕುರಿತ ಒಂದು ಕೃತಿ ಬಹುರೂಪಿ ಪ್ರಕಟಿಸುತ್ತದೆ ಎಂದು ಘೋಷಿಸಿದರು. ಯಾವುದೇ ತಾಯಿ ಒಂದು ಬೆಲ್ಲ ಕಡೆದ ಕಲ್ಲಿನಂತೆ. ನೋವಿನಿಂದ ಗಟ್ಟಿಯಾದರೂ ಎಲ್ಲರಿಗೂ ಸಿಹಿ ಹಂಚುವಾಕೆ ಎಂದು ಬಣ್ಣಿಸಿದರು. ‘ಬಹುರೂಪಿ’ಯ ಸಂಸ್ಥಾಪಕಿ ಶ್ರೀಜಾ ವಿ ಎನ್ ಉಪಸ್ಥಿತರಿದ್ದರು.
Key words: protect – motherhood – society-Dr. Vijaya