ಮೈಸೂರು ಜನವರಿ,30,2024 (www.justkannada.in): ನಮ್ಮ ದೇಶವನ್ನು, ರಾಜ್ಯವನ್ನು ರಕ್ಷಣೆ ಮಾಡಲು ಸಮಾಜವನ್ನು ಸದೃಢವಾಗಿ ಬೆಳೆಸಬೇಕಾದರೆ ಮಕ್ಕಳನ್ನು ರಕ್ಷಣೆ ಮಾಡಬೇಕು. ಮಕ್ಕಳ ರಕ್ಷಣೆಯನ್ನು ಮಾಡಿದಾಗ ನಾವು ಮುಂದಿನ ಭವಿಷ್ಯವನ್ನು ವಿಚಾರ ಮಾಡಲು ಸಾಧ್ಯ. ಹೀಗಾಗಿ ಮಕ್ಕಳ ರಕ್ಷಣೆಗೆ ಪ್ರಬಲ ಪ್ರಥಮ ಆಧ್ಯತೆಯನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲ್ಸೆ ಅವರು ಹೇಳಿದರು.
ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ “ಮಕ್ಕಳಿಗೆ ಸಂಬoಧಿಸಿದ ಕಾನೂನುಗಳು” ಕುರಿತು ಒಂದು ದಿನದ ತರಬೇತಿ ಹಾಗೂ ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಏಳಿಗೆ ಕುರಿತು ನಾವು ಜವಾಬ್ದಾರಿಯುತವಾಗಿ ಮಕ್ಕಳ ರಕ್ಷಣೆ ಮತ್ತು ನಿರ್ವಹಣೆ ಮಾಡಬೇಕು. ಅರಿವೇ ಗುರು ಎನ್ನುತ್ತಾ ಮಕ್ಕಳಿಗೆ ಬಾಲ್ಯದಲ್ಲಿಯೇ ನೈತಿಕತೆ, ಆಚಾರ ವಿಚಾರಗಳು , ಸಂಪ್ರದಾಯದ ಬಗ್ಗೆ ತಿಳಿಸಿದರೆ ದೇಶವನ್ನು ಮುನ್ನಡೆಸಲು ಸಹಕಾರಿಯಾಗುತ್ತದೆ. ಮಕ್ಕಳನ್ನು ಬೆಳೆಸುವಲ್ಲಿ ನಮ್ಮ ನಮ್ಮ ಜವಾಬ್ದಾರಿಗಳನ್ನೂ ಸಹ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ.ರಾಜೇಂದ್ರ ಕೆ.ವಿ ರವರು ಮಾತನಾಡಿ, ಮಕ್ಕಳ ಹಕ್ಕುಗಳು, ಬಾಲ್ಯವಿವಾಹ, ಮಕ್ಕಳ ಶಿಕ್ಷಣದ ಕುರಿತು ಪೋಷಕರಿಗೆ ಹಾಗೂ ಅಧಿಕಾರಿಗಳಿಗೆಅರಿವು ಮೂಡಿಸಬೇಕು. ಮೈಸೂರು ಇತ್ತೀಚಿಗೆ ಅತಿ ವೇಗದಲ್ಲಿ ನಗರೀಕರಣಕ್ಕೆ ಒಳಗಾಗುತ್ತಿದೆ. ಆದರೆ ಇನ್ನೂ ಸಹ ಗ್ರಾಮೀಣ ಭಾಗಗಳಲ್ಲಿ ಹೆಣ್ಣು ಮಕ್ಕಳ ಬಾಲ್ಯ ವಿವಾಹ ನಡೆಯುತ್ತಿದೆ. ಮಕ್ಕಳ ರಕ್ಷಣೆಯಲ್ಲಿ ಮಕ್ಕಳ ಪಾಲನಾ ಪೋಷಣೆ ಮಾಡಬೇಕಾದ ಮಕ್ಕಳ ಹಕ್ಕುಗಳು ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಗಳ ಬಗ್ಗೆ ಅರಿವು ಮೂಡಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಗಂಡು ಹೆಣ್ಣು ಎಂಬ ತಾರತಮ್ಯ ಮಾಡಬಾರದು. ಪ್ರತಿಯೊಬ್ಬರಲ್ಲಿಯೂ ಮಾನವೀಯತೆ, ಸಂವೇದನಾ ಶೀಲತೆ ಇರಬೇಕು , ಹೆಣ್ಣು ಮಕ್ಕಳು ಸಮಸ್ಯೆಗಳನ್ನು ಹೊತ್ತು ತಂದಾಗ ಅದನ್ನು ಕಡೆಗಣಿಸಬಾರದು . ಸಮಸ್ಯೆ ಚಿಕ್ಕಾದಾಗಿದ್ದಗಲೆ ಅದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲಾ ವಿಭಾಗದ ಅಧಿಕಾರಿಗಳು ಸಹ ಇದರ ಬಗ್ಗೆ ಗಮನ ಹರಿಸಬೇಕು. ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು .ಮಕ್ಕಳ ಬಗೆಗೆ ಯಾವುದೇ ರೀತಿಯ ತೊಂದರೆಗಳು ಕಂಡು ಬಂದಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಬಿ.ಜಿ ಅವರು, ಈ ಕಾರ್ಯಕ್ರಮ ಅವಶ್ಯಕತೆ ಮತ್ತು ಅನಿವಾರ್ಯ ಕಾರ್ಯಗಾರ ಇದು. ಇಂಡಿಯನ್ ಮೆಜಾರಿಟಿ ಕಾಯಿದೆ ಮತ್ತು ಫೋಕ್ಸೋ ಕಾಯಿದೆ ಪ್ರಕಾರ 18 ವರ್ಷದೊಳಗಿನ ಎಲ್ಲರೂ ಸಹ ಮಕ್ಕಳೇ ಎಂದು ಪರಿಗಣಿಸಲಾಗುತ್ತದೆ. ಸಂವಿಧಾನದ 14 ನೇ ವಿಧಿಯು ಸಮಾನತೆಯ ಹಕ್ಕು, 15 ನೆಯ ವಿಧಿಯು ರೈಟ್ಸ್ ಆಗೈನೆಸ್ಟ್ ದಿಸ್ಕ್ರಿಮಿನೇಷನ್, ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರವನ್ನೂ ಪಡೆಯುವ ಹಕ್ಕು, 6ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾದುದ್ದು, ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ಆಸ್ತಿ ಎಂಬುದಾಗಿ ತಿಳಿಸಿದರು. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡಿದೆ ಅದರ ಅನುಷ್ಠಾನದ ಜವಾಬ್ದಾರಿ ಎಲ್ಲಾ ಇಲಾಖೆಗಳ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಛಾಯಾದೇವಿ ಶಾಲಾ ಮಕ್ಕಳಿಂದ ಬಾಲ್ಯ ವಿವಾಹದ ನಿಷೇಧ ಕುರಿತಂತೆ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಎಸ್. ಮಂಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಹೆಚ್. ಆರ್. ಸುರೇಶ್, ಜಿಲ್ಲಾ ಮಕ್ಕಳಾ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳಾದ ಯೋಗೇಶ್ ಎನ್. ಟಿ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸಿ.ಅನಿತ, ಪೋಲಿಸ್ ಮಹಾ ನಿರ್ದೇಶಕರ ತರಬೇತಿ ಕಚೇರಿಯ ಪೋಲಿಸ್ ತರಬೇತುದಾರರಾದ ರೋಹಿತ್ ಸಿ.ಜೆ, ಶಿಕ್ಷಣ ಇಲಾಖೆಯ ಪಾಂಡು ಮತ್ತಿತರರು ಉಪಸ್ಥಿತರಿದ್ದರು.
Key words: Protection -children – strong -priority-KSOU VC-Prof. Sharanappa v. Hulse