ಮೈಸೂರು,ಡಿಸೆಂಬರ್,25,2020(www.justkannada.in): ಸಂತಾನೋತ್ಪತ್ತಿಗಾಗಿ ವಿದೇಶದಿಂದ ವಲಸೆ ಬಂದು ಮೀನುಗಾರಿಕೆಗೆ ಬಿಡಲಾಗಿದ್ದ ಬಲೆ ಸಿಲುಕಿ ನರಳಾಡುತ್ತಿದ್ದ ಫೆಲಿಕಾನ್ ಪಕ್ಷಿಯೊಂದನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಉರಗ ತಜ್ಞರೊಬ್ಬರು ಸುರಕ್ಷಿತವಾಗಿ ರಕ್ಷಿಸಿರುವ ಘಟನೆ ಗುರುವಾರ ಸಂಜೆ ಮೈಸೂರು-ನಂಜನಗೂಡು ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಮಂಡಕಳ್ಳಿ ಕೆರೆಯಲ್ಲಿ ನಡೆದಿದೆ.
ಪ್ರತಿವರ್ಷ ಮಂಡಕಳ್ಳಿ ಕೆರೆಗೆ ವಿದೇಶಿ ಪಕ್ಷಿಗಳು ವಲಸೆ ಬರಲಿದ್ದು, ಈ ಬಾರಿಯೂ ಈಗಷ್ಟೇ ವಲಸೆ ಪಕ್ಷಿಗಳು ಆಗಮಿಸುತ್ತಿವೆ. ಕಳೆದ ಐದಾರು ದಿನದಿಂದ ಮಂಡಕಳ್ಳಿ ಕೆರೆಯಲ್ಲಿ ಬೀಡು ಬಿಟ್ಟಿದ್ದ `ಫೆಲಿಕಾನ್’ ಪಕ್ಷಿಯೊಂದು ಮೀನುಗಾರಿಕೆಗೆ ಕೆರೆಯಲ್ಲಿ ಬಿಡಲಾಗಿದ್ದ ಬಲೆಗೆ ಸಿಲುಕಿಕೊಂಡಿದೆ. ಕೆರೆ ಮದ್ಯಭಾಗದಲ್ಲಿ ಫೆಲಿಕಾನ್ ಬಲೆಗೆ ಸಿಲುಕಿದ್ದರಿಂದ ಸಾರ್ವಜನಿಕರ ಗಮನಕ್ಕೆ ಬಂದಿಲ್ಲ. ಸುಮಾರು ಎರಡು ತಾಸು ಬಲೆಯಿಂದ ಬಿಡಿಸಿಕೊಳ್ಳಲು ಪರದಾಡುತ್ತಾ ರೆಕ್ಕೆ ಬಡಿಯುತ್ತಿದ್ದುದ್ದನ್ನು ಗಮನಿಸಿದ ದಾರಿ ಹೋಕರು ಉರಗ ತಜ್ಞ ಸ್ನೇಕ್ ಶಿವಕುಮಾರ್ ಗೆ ಮಾಹಿತಿ ನೀಡಿದ್ದರು.
ಸಂಜೆ 4 ಗಂಟೆಗೆ ಸ್ಥಳಕ್ಕಾಗಮಿಸಿದ ಸ್ನೇಕ್ ಶಿವಕುಮಾರ್ ಬಲೆಯಿಂದ ಫೆಲಿಕಾನ್ ಅನ್ನು ಬಿಡಿಸಲು ತೀವ್ರ ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ಬಲೆಬಿಟ್ಟಿದ್ದ ಮೀನುಗಾರರು ಸಿಗದ ಕಾರಣ ಪಕ್ಷಿ ರಕ್ಷಣೆಗೆ ಹಿನ್ನಡೆ ಉಂಟಾಯಿತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದಾಗ ಸಂಜೆ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಲೀಡಿಂಗ್ ಫೈರ್ ಆಫಿಸರ್ ತಮ್ಮಣ್ಣ, ಸಿಬ್ಬಂದಿಗಳಾದ ಕೆ.ಟಿ.ಸ್ವಾಮಿ, ಕೆ.ಎಂ.ಆನಂದ್, ಮನೋಹರ್ ಮತ್ತು ಕುಮಾರ್ ಅವರು ಆಗಮಿಸಿ ಬೋಟ್ನಲ್ಲಿ ಉರಗ ತಜ್ಞ ಸ್ನೇಕ್ ಶಿವಕುಮಾರ್ ಅವರೊಂದಿಗೆ ತೆರಳಿ ಬಲೆಯಲ್ಲಿ ಸಿಲುಕ್ಕಿದ್ದ ಫೆಲಿಕಾನ್ ಅನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಲೆಯಿಂದ ಬಿಡಿಸುತ್ತಿದ್ದಂತೆ ಫೆಲಿಕಾನ್ ಹಾರುತ್ತಾ ಕೆರೆ ದಡದಲ್ಲಿದ್ದ ಮರವೇರಿ ಕುಳಿತುಕೊಂಡು ಸಂಭ್ರಮಿಸಿತು.
Key words: Protection – migratory bird -pelican -trapping –mysore-Mandakalli lake.