ಕೆಎಂಎಫ್ ಮುಂಭಾಗ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಪ್ರತಿಭಟನೆ.

 

ಮೈಸೂರು,ಡಿಸೆಂಬರ್,22,2021(www.justkannada.in): ಕೆಎಂಎಫ್ ನ ನಂದಿನಿ ಬ್ರ್ಯಾಂಡ್ ನ  ತುಪ್ಪದ ನಕಲಿ ಉತ್ಪಾಧನೆ ಮೈಸೂರಿನ ಬಳಿ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿರುವುದು ಆತಂಕದ ಸಂಗತಿಯಾಗಿದೆ. ರಾಜ್ಯದ ಜೀವನಾಡಿಯಾಗಿರುವ ರೈತರನ್ನೇ ಗುರಿಯಾಗಿಸಿಕೊಂಡು ಸಹಕಾರಿ ತತ್ವದಡಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಕೆಎಂಎಫ್. ಇದೀಗ, ನಕಲಿ ತುಪ್ಪ ಉತ್ಪಾದನೆ ಜಾಲ ಬಯಲಾಗಿರುವುದು ಜನತೆಯಲ್ಲಿ ಸಂಸ್ಥೆ ಬಗ್ಗೆ ಸಂಶಯ ಮೂಡಿಸಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ತಿಳಿಸಿದರು.

ಕೆಎಂಎಫ್ ಮುಂಭಾಗ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೆಎಂಎಫ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಲೋಕೇಶ್ ಪಿಯಾ, ಭಾರಿ ಬೇಡಿಕೆಯಲ್ಲಿರುವ ನಂದಿನಿ ಬ್ರ್ಯಾಂಡ್ ಗೆ ಕೆಟ್ಟ ಹೆಸರು ತರುವ ದುರುದ್ದೇಶದಿಂದಲೇ ಇಂಥ ಕೃತ್ಯಗಳು ನಡೆಯುತ್ತಿರುವುದು ಮೇಲ್ನೊಟಕ್ಕೆ ಸಾಬೀತಾಗಿದೆ. ಸಂಸ್ಥೆಯ ಆಡಳಿತ ವರ್ಗ ಹಾಗೂ ಸಿಬ್ಬಂದಿಗಳ ಕೈವಾಡದ ಬಗೆಗೂ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗುತ್ತಿದೆ.

ಪ್ರತಿಷ್ಠಿತ ಸಂಸ್ಥೆ ನಂದಿನಿಯ ಉತ್ಪನ್ನಗಳ ಮಾರಾಟದ ಜಾಲ ಬೃಹತ್ತಾಗಿದೆ. ಈ ವಿತರಣಾ ಜಾಲದ ಸಹಕಾರವಿಲ್ಲದೆ ಇಂಥ ನಕಲಿ ಉತ್ಪನ್ನಗಳ ಪೂರೈಕೆ ಅಸಾಧ್ಯ. ಜತೆಗೆ ಸಂಸ್ಥೆಯ ಮೊಹರು ಹಾಗೂ ಪ್ಯಾಕಿಂಗ್ ಸಹ ನಕಲಿಯಾಗಿ ಬಳಕೆಯಾಗಿರುವುದು ಸಹ ಸಂಸ್ಥೆಯವರು ಕೈಜೋಡಿರುವ ಬಗೆಗಿನ ಅನುಮಾನವನ್ನು ಪುಷ್ಠಿ ಮಾಡುತ್ತದೆ.

ಈ ನಡುವೆ ಮೈಸೂರಿನ ಪ್ರತಿಷ್ಠಿತ ಸಿಹಿ ತಿನಿಸು ತಯಾರಿಕಾ ಸಂಸ್ಥೆ ಮಹಾಲಕ್ಷ್ಮೀ ಹೆಸರು ಪ್ರಸ್ತಾಪವಾಗಿರುವುದು ಅನುಮಾನಕ್ಕೆ ಎಡೆಮಾಡಿದೆ. ನಂದಿನಿ ಉತ್ಪನ್ನವಾದ ತುಪ್ಪದ ಖರೀದಿಗಾಗಿಯೇ  ಕೋಟ್ಯಾಂತರ ರೂ.ಗಳನ್ನು ವ್ಯಯಿಸುತ್ತಿರುವ ಮಹಾಲಕ್ಷ್ಮೀ ಸ್ವೀಟ್ಸ್, ನಂದಿನಿ ಉತ್ಪನ್ನಗಳ ಬಹು ದೊಡ್ಡ ಗ್ರಾಹಕರು. ಬಹುಶಃ, ಇದನ್ನೇ ಮನಗಂಡೇ ಮಹಾಲಕ್ಷ್ಮೀ ಸ್ವೀಟ್ಸ್  ವಿರುದ್ಧ ಅಪಪ್ರಚಾರ ನಡೆಸಿ ಅವರು ನಂದಿನಿ ಬ್ರ್ಯಾಂಡ್ ನಿಂದ ದೂರ ಉಳಿಯಲಿ ಎಂದು ಷಡ್ಯಂತ್ರ ನಡೆಸಿರುವ ಶಂಕೆ ಇದೆ.

ಮಹಾಲಕ್ಷ್ಮೀ ಸ್ವೀಟ್ಸ್ ನವರು ತಾವು ನಂದಿನಿ ಸಂಸ್ಥೆಯ ಅಸಲಿ ತುಪ್ಪ ಬಳಸುತ್ತಿರುವ ಬಗ್ಗೆ ಮಾಧ್ಯಮಗಳ ಮೂಲಕ ದಾಖಲೆ ಸಮೇತ ಸಾಕ್ಷಿ ನೀಡಿ, ಘಟನೆ ಬಗ್ಗೆ ಅಸಮಧಾನ ಹೊರ ಹಾಕಿರುವುದು ಸರಿಯಷ್ಟೆ.

ಆದ್ದರಿಂದ, ಇದೀಗ ಮಹಾಲಕ್ಷ್ಮೀ ಸ್ವೀಟ್ಸ್ ನವರು ಬಳಸುತ್ತಿದ್ದ ನಂದಿನಿ ತುಪ್ಪ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಆ ಮೂಲಕ ನಂದಿನಿ ಸಂಸ್ಥೆ ಮೇಲಿನ ಕಳಂಕ ತೊಡೆದು ಹಾಕಬೇಕು ಎಂದರು.

Key words: Protest- led – KMF- front-mysore- member- Lokesh Pia.