ಮೈಸೂರು,ಮೇ,16,2022(www.justkannada.in): ಹಿಂದುಳಿದ ವರ್ಗಗಳ ಸ್ಥಳೀಯ ರಾಜಕೀಯ ಮೀಸಲಾತಿ ರಕ್ಷಣೆಗಾಗಿ ಆಗ್ರಹಿಸಿ ಮೇ,18 ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಸ್ಥಳೀಯ ಮೀಸಲಾತಿ ಸಂರಕ್ಷಣಾ ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಕೆ. ಎಸ್ ಶಿವರಾಮ್ ತಿಳಿಸಿದರು.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ.ಎಸ್ ಶಿವರಾಮ್, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಹಿಂದುಳಿದವರ್ಗಗಳಿಗೆ ಮೀಸಲಾತಿ ಇಲ್ಲದ ಕಾರಣ ರಾಜಕೀಯವಾಗಿ ಈ ಸಮುದಾಯಗಳು ಹಿನ್ನಡೆಯನ್ನು ಅನುಭವಿಸುತ್ತಿವೆ. ಈಗ ಏಕಾಏಕಿ ಸುಪ್ರೀಂ ಕೋರ್ಟ್ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಹೊರತುಪಡಿಸಿ ಚುನಾವಣೆ ಮಾಡಿ ಎಂದು ಆದೇಶಿಸಿರುವುದರಿಂದ ಮೀಸಲಾತಿಗೆ ಸಂಚಕಾರ ಬಂದಿದ್ದು, ಈ ತೀರ್ಪು ಹಿಂದುಳಿದವರ್ಗಗಳಿಗೆ ಮರಣ ಶಾಸನವಾಗಿದೆ. ಆದ್ದರಿಂದ ಎಚ್ಚೆತ್ತು ಹೋರಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಸಂಘಟನೆಯ ಕೊರತೆ, ಅಧಿಕಾರ ಬಲದ ಕೊರತೆಯಿಂದ ನಿರಂತರ ಶೋಷಣೆ ಅನುಭವಿಸುತ್ತಿರುವ ಹಿಂದುಳಿದವರ್ಗಗಳು ರಾಜಕೀಯವಾಗಿ ತಬ್ಬಲಿಯ ಸ್ಥಿತಿಯನ್ನು ತಲುಪುತ್ತಿದ್ದಾರೆ. 1993 ರಲ್ಲಿ ಶೇ.33 ರಷ್ಟು ಇದ್ದ ಹಿಂದುಳಿದವರ್ಗಗಳ ಮೀಸಲಾತಿ 2010 ರ ನಂತರ ಶೇ.27 ಕ್ಕೆ ಇಳಿಕೆಯಾಗಿದೆ. ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸುಪ್ರೀಂ ಕೋರ್ಟ್ ಮೀಸಲಾತಿಯನ್ನು ಹೊರತುಪಡಿಸಿ ಚುನಾವಣೆ ನಡೆಸಲು ಸೂಚಿಸಿರುವುದರಿಂದ ಈ ವರ್ಗಗಳಿಗೆ ಮೀಸಲಾತಿ ಕೈತಪ್ಪುವ ಆತಂಕವಿದೆ. ಆದ್ದರಿಂದ ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸದಿದ್ದರೆ ಹಿಂದುಳಿದವರ ಮೀಸಲಾತಿಗೆ ಸಂಚಕಾರ ಬರುವುದು ಶತಸಿದ್ಧ ಎಂದು ಬೇಸರ ವ್ಯಕ್ತಪಡಿಸಿದರು.
ಮೀಸಲಾತಿ ವಿರೋಧಿ ಶಕ್ತಿಗಳು ವ್ಯವಸ್ಥಿತವಾಗಿ ಸಂವಿಧಾನದ ಮೇಲೆ ಧಾಳಿ ನಡೆಸುತ್ತಿದ್ದು ಹಿಂದುಳಿದ ಮತ್ತು ಶೋಷಿತ ಸಮುದಾಯಗಳು ಮೀಸಲಾತಿ ಉಳಿಸಿಕೊಳ್ಳುವುದರ ಜೊತೆಗೆ ಸಂವಿಧಾನದ ರಕ್ಷಣೆಗೆ ಮುಂದಾಗಬೇಕಾಗಿದೆ. ರಾಜಕೀಯವಾಗಿ ಪ್ರಜ್ಞಾವಂತಿಕೆ – ದೂರದೃಷ್ಟಿಯನ್ನು ರೂಢಿಸಿಕೊಂಡು ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿಯನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.
ಆದ್ದರಿಂದ ಹಿಂದುಳಿದವರ್ಗಗಳ ಮೀಸಲಾತಿ ವಿವಾದ ಇತ್ಯರ್ಥವಾಗುವ ಮುನ್ನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸಬಾರದೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. ಸರ್ವೋಚ್ಛ ನ್ಯಾಯಾಲಯದ ಆದೇಶದಿಂದ ಹಿಂದುಳಿದವರ್ಗಗಳ ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ಧಕ್ಕೆಯಾಗಿದೆ. ಕಳೆದ 4 ತಿಂಗಳಿನಿಂದ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಂಡು ಹಿಂದುಳಿದವರ್ಗಗಳ ಆಯೋಗದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರೆ ಇಂತಹ ದುಸ್ಥಿತಿ ಎದುರಾಗುತ್ತಿರಲಿಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತು ಕೂಡಲೇ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದರ ಜೊತೆಗೆ ವಿಧಾನಸಭೆಯಲ್ಲಿ ಆರು ತಿಂಗಳವರೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಿ ಮಸೂದೆಯನ್ನು ಮಂಡಿಸಿ ಚುನಾವಣೆಯನ್ನು ಮುಂದೂಡಬೇಕು ಹಾಗೂ ಶೀಘ್ರವಾಗಿ ಮೂರು ಹಂತದ ಪರಿಶೀಲನಾ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿ ಮೀಸಲಾತಿಯನ್ನು ರಕ್ಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಕೆ.ಎಸ್ ಶಿವರಾಮ್ ಒತ್ತಾಯಿಸಿದರು.
ಹಿಂದುಳಿದವರ್ಗಗಳ ಮೀಸಲಾತಿ ರಕ್ಷಣೆಯ ಕುರಿತಾಗಿ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನ ಹೊರತುಪಡಿಸಿ ಯಾರು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿಲ್ಲ. ಆ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮೀಸಲಾತಿ ವಿಚಾರದಲ್ಲಿ ತಮ್ಮ ನಿಲುವನ್ನು ಘೋಷಿಸಬೇಕು. ಹಿಂದುಳಿದವರ್ಗಗಳ ರಾಜಕೀಯ ಮೀಸಲಾತಿಯನ್ನು ನೀಡದೆ ಚುನಾವಣೆ ನಡೆಸುವುದನ್ನು ಮುಂದೂಡಬೇಕು. ಸರ್ಕಾರ ಕೂಡಲೇ ವಿಶೇಷ ಅಧಿವೇಶನವನ್ನು ಕರೆದು ಆರು ತಿಂಗಳ ಕಾಲ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲು ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಬೇಕು. ಎಚ್.ಕಾಂತರಾಜ್ ರವರು ಆಯೋಗದ ವರದಿಯನ್ನು ಈ ಕೂಡಲೇ ಸರ್ಕಾರ ಒಪ್ಪಬೇಕು. ಆ ವರದಿಯನ್ನು ಮೂರು ಹಂತದ ಪರಿಶೀಲನೆಗೆ ಒಳಪಡಿಸಬೇಕು. ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಿನಾಂಕ 18.05.2022 ರ ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಗಳ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೆ.ಎಸ್ ಶಿವರಾಮ್ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಪುಟ್ಟಸಿದ್ಧಶೆಟ್ಟಿ, ಸಂಚಾಲಕರಾದ ಹೆಚ್.ಎಸ್.ಪ್ರಕಾಶ್, ಎನ್.ಆರ್.ನಾಗೇಶ್, ಯೋಗೀಶ್ ಉಪ್ಪಾರ್ ಸೇರಿ ಹಲವರಿದ್ದರು.
Key words: Protest -May 18- protection -ackward classes – local political- reservations-KS Sivaram.