ಮೈಸೂರು,ಅ,24,2019(www.justkannada.in): ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನ ಖಂಡಿಸಿ ಮೈಸೂರಿನಲ್ಲಿ ಇಂದು ಜನಾಂದೋಲನಗಳ ಮಹಾ ಮೈತ್ರಿಯಿಂದ ಪ್ರತಿಭಟನೆ ನಡೆಸಲಾಯಿತು.
ಕೇಂದ್ರದ ಮುಕ್ತ ವ್ಯಾಪಾರ ನೀತಿಯನ್ನು ಖಂಡಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಬಳಿ ಜನಾಂದೋಲನಗಳ ಮಹಾ ಮೈತ್ರಿ ವತಿಯಿಂದ ಪ್ರತಿಭಟನೆ ನಡೆಯಿತು. ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೈಸೂರು ಘಟಕದಿಂದ ಧರಣಿ ನಡೆಸಲಾಯಿತು. ರೈತರು ರಸ್ತೆಯುದ್ದಕ್ಕೂ ಅರೆಬೆತ್ತಲೆ ಮೆರವಣಿಗೆ ಮಾಡಿ ಕೇಂದ್ರಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಮುಕ್ತ ವ್ಯಾಪರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಈ ಒಪ್ಪಂದಿಂದ ವಿದೇಶಿ ವಸ್ತುಗಳು ಸುಂಕ ರಹಿತವಾಗಿ ದೇಶದ ಮಾರುಕಟ್ಟೆ ಪ್ರವೇಶಿಸಲಿವೆ. ಈ ಒಪ್ಪಂದದಿಂದ ದೇಶ ಅಭಿವೃದ್ಧಿಯಾಗುತ್ತೆ ಎಂದು ಭ್ರಮೆಯಲ್ಲಿದ್ದಾರೆ. ಇದರಿಂದ ಕೇವಲ ಮುಂದುವರೆದ ರಾಷ್ಟ್ರದ ದೊಡ್ಡಮಟ್ಟದ ಉದ್ಯಮಿಗಳಿಗೆ ಲಾಭವಾಗಲಿದೆ. ದೇಶದ ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ತೀವ್ರ ತೊಂದರೆಯಾಗಲಿದೆ. ಇದನ್ನು ವಿರೋಧಿಸಿ ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮನೆ ಮನೆಗಳಿಂದ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಈ ನೀತಿಯಿಂದ ಗ್ರಾಮಗಳು ಸ್ಮಶಾನವಾಗುತ್ತದೆ- ರೈತ ಮುಖಂಡ ವಿದ್ಯಾಸಾಗರ್ ಹೇಳಿಕೆ
ಕೇಂದ್ರ ಸರ್ಕಾರದ ಈ ನೀತಿಯಿಂದ ದೇಶದಲ್ಲಿ ಇರುವ ಗ್ರಾಮಗಳು ಸ್ಮಶಾನವಾಗುತ್ತದೆ. ಇದು ದೇಶರೈತರು ಹಾಗೂ ಸಣ್ಣ ಕೈಗಾರಿಕೆಗಳ ನಾಶ ಮಾಡಲು ಬಳಸುತ್ತಿರುವ ಒಂದು ಕುತಂತ್ರ. ಇದರಿಂದ ಈ ಹಿಂದೆ ರೇಷ್ಮೆ ಬೆಳೆಯಲ್ಲಿ ಉಂಟಾದ ತೊಂದರೆ ರೀತಿಯಲ್ಲಿ ಇದು ಸಹ ಹಾಗುತ್ತೆ. ಅಲ್ಲಿಂದ ಇಲ್ಲಿಯ ವರೆಗೂ ಸುಮಾರು 10 ಲಕ್ಷ ಮಂದಿ ರೈತರು ಸಾವನಪ್ಪಿದ್ದಾರೆ. ಮುಂದೆ ಈ ಒಪ್ಪಂದವೂ ಜಾರಿಯಾದರೆ ಗ್ರಾಮಗಳೆಲ್ಲವೂ ಸ್ಮಶಾನಗಳಾಗುತ್ತವೆ. ಮಹಿಳಾ ರೈತರು ಬೀದಿಗೆ ಬೀಳುತ್ತಾರೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಸಾಹಿತಿ ದೇವನೂರು ಮಹದೇವು ಸೇರಿ ಹಲವರು ಭಾಗಿಯಾಗಿದ್ದರು.
Key words: Protest – Mysore- against -Regional -Comprehensive -Economic Partnership- Free Trade Agreement
……