ಮೈಸೂರು,ಆಗಸ್ಟ್,5,2021(www.justkannada.in): ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಹಾಗೂ ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಮೈಸೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಅಣ್ಣಮಲೈ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಣ್ಣಾಮಲೈ ಭಾವಚಿತ್ರ ವಿರೂಪಗೊಳಿಸಿ ಧರಣಿ ನಡೆಸಿದ ಪ್ರತಿಭಟನಾಕಾರರು ಕೂಡಲೇ ಮೇಕೆದಾಟು ಯೋಜನೆ ಜಾರಿಯಾಗುವಂತೆ ಆಗ್ರಹಿಸಿದರು. ಇದೇ ವೇಳೆ ಅಣ್ಣಾಮಲೈ ಕರ್ನಾಟಕಕ್ಕೆ ದ್ರೋಹಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಆರಂಭಿಸುವಂತೆ ಆಗ್ರಹಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಕರ್ನಾಟಕ ಸೇನಾಪಡೆ ಪ್ರತಿಭಟ ನಡೆಸಿತು. ತಮಿಳುನಾಡು ಸರ್ಕಾರ ಹಾಗೂ ಅಣ್ಣಾಮಲೈ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮೇಕೆದಾಟು ಯೋಜನೆಯನ್ನು ಕೂಡಲೇ ಪ್ರಾರಂಭಿಸಬೇಕು. ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ, ಕೇಂದ್ರದಲ್ಲೂ ಬಿಜೆಪಿ ಇದೆ. ಇಲ್ಲಿನ ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಮೇಕೆದಾಟು ಯೋಜನೆ ಆರಂಭಿಸಬೇಕು. ಯೋಜನೆ ಪ್ರಾರಂಭಿಸಿ ರಾಜ್ಯದ ಜನತೆಗೆ ಅನುಕೂಲ ಮಾಡಿಕೊಡಬೇಕು.
ಮೇಕೆದಾಟು ಯೋಜನೆಗಾಗಿ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಮೇಕೆದಾಟು ಯೋಜನೆಯಿಂದ ಕರ್ನಾಟಕ, ತಮಿಳುನಾಡು ಎರಡು ರಾಜ್ಯಕ್ಕೂ ಉಪಯೋಗವಾಗಲಿದೆ. ಕಾವೇರಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಮೇಕೆದಾಟು ಯೋಜನೆಯಿಂದ ಎರಡು ರಾಜ್ಯದ ರೈತರಿಗೂ ಉಪಯೋಗವಾಗುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಹೋಗಲಿದೆ. ಇನ್ನಾದರೂ ಎಚ್ಚೆತ್ತು ಸರ್ಕಾರ ಮೇಕೆದಾಟು ಯೋಜನೆ ಆರಂಬಿಸಬೇಕೆಂದು ಒತ್ತಾಯಿಸಿದರು.
Key words: Protest –Mysore- demanding –implementation -Mekedatu project.