ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ರದ್ದುಪಡಿಸದಂತೆ ಒತ್ತಾಯಿಸಿ ಕಲಾವಿದರಿಂದ ಪ್ರತಿಭಟನೆ

ಮೈಸೂರು,ಸೆಪ್ಟೆಂಬರ್,24,2020(www.justkannada.in) :  ದಸರಾ ಮಹೋತ್ಸವದಲ್ಲಿ  ಏಳು ವಿವಿಧ ಸಭಾಂಗಣಗಳಲ್ಲಿ ನಡೆಯುವ ಸಾಂಸ್ಕೃತಿ ಕಾರ್ಯಕ್ರಮಗಳನ್ನು ರದ್ದುಪಡಿಸದಂತೆ ಒತ್ತಾಯಿಸಿ ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

jk-logo-justkannada-logo

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಜಮಾವಣೆಗೊಂಡ ಪ್ರತಿಭಟನಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಸಮಿತಿಯ ಅಧ್ಯಕ್ಷ ಬಿ.ಎಸ್.ಜಯರಾಜು ಮಾತನಾಡಿ,  ಕೊರೊನಾದಿಂದ ಕಾರ್ಯಕ್ರಮಗಳಿಗೆ ಅವಕಾಶವಿಲ್ಲದೆ ವೃತ್ತಿಪರ ಕಲಾವಿದರು ಕಂಗಾಲಾಗಿದ್ದಾರೆ. ಅವರಿಗೆ ಜೀವನ ನಡೆಸುವುದೂ ಕಷ್ಟವಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ವೃತ್ತಿಪರ ಕಲಾವಿದರ ಹಿತಾಸಕ್ತಿಯನ್ನು ಕಾಪಾಡುವುದು ಸರಕಾರದ ಆದ್ಯ ಕರ್ತವ್ಯ ಎಂದರು.

Protest-against-cancellation-cultural-program-dasara 

ಅರಮನೆ ವೇದಿಕೆಯಲ್ಲಿನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಕಡ್ಡಾಯವಾಗಿ ಅವಕಾಶ ಕಲ್ಪಿಸಬೇಕು. ಕಲಾಮಂದಿರ,ಕಿರುರಂಗಮಂದಿರ, ಜಗನ್ ಮೋಹನ್ ಪ್ಯಾಲೇಸ್, ಚಿಕ್ಕಗಡಿಯಾರ, ಗಾನಭಾರತಿ ವೀಣೇಶೇಷಣ್ಣ ಭವನ, ಪುರಭವನ, ನಾದಬ್ರಹ್ಮ ಸಂಗೀತ ಸಭಾಂಗಣ ಈ ಏಳು ವೇದಿಕೆಗಳಲ್ಲಿ ದಸರಾದ 9ದಿನಗಳೂ ಕಾರ್ಯಕ್ರಮವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಕೊರೋನಾ ನೆಪವೊಡ್ಡಿ ಕಾರ್ಯಕ್ರಮ ರದ್ದುಪಡಿಸಬಾರದು. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರ ಸಂಭಾವನೆಯನ್ನು ಹೆಚ್ಚಿಸಿ ಗೌರವಯುತ ಜೀವನಕ್ಕೆ ಅನುವು ಮಾಡಿಕೊಡಬೇಕು. ನಿರ್ಲಕ್ಷಿತ, ಅಶಕ್ತ, ಕಲಾವಿದರ ಹಿತಾಸಕ್ತಿಗಾಗಿ ರಾಜ್ಯಮಟ್ಟದಲ್ಲಿ ಕಲಾವಿದರ ಪ್ರಾಧಿಕಾರ ರಚನೆ ಮಾಡಿ ವೃತ್ತಿ ಕಲಾವಿದರು ಮತ್ತು ಅವರ ಕುಟುಂಬದವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅಗ್ರಹಿಸಿದರು.

ನೈಜ ಕಲಾವಿದರನ್ನು ಗುರುತಿಸಿ ಇಲಾಖೆಯ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಿರಿಯ, ಅಶಕ್ತ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು 5000 ರೂ.ಗೆ ಹೆಚ್ಚಳ ಮಾಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ.ಜಾತಿ,ಪ.ವರ್ಗಗಳ ಕಲಾವಿದರಿಗೆ ವಿಶೇಷ ಯೋಜನೆಯಡಿ ಅನುದಾನವನ್ನು ಹೆಚ್ಚಿಸಿ ಧನ ಸಹಾಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಯೋಜನೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಉಪಾಧ್ಯಕ್ಷ ಬಿ.ಎನ್.ಜನಾರ್ದನ್, ಪ್ರಧಾನಕಾರ್ಯದರ್ಶಿ ಎಂ.ಪುಟ್ಟಸ್ವಾಮಿ, ಸಹಕಾರ್ಯದರ್ಶಿ ಶ್ರೀಕಂಠರಾವ್ ಬಿ, ಖಜಾಂಚಿ ರಾಜು ಎಸ್, ನಿರ್ದೇಶಕರುಗಳಾದ ಗಣೇಶ್ ಈಶ್ವರ್ ಭಟ್, ಮೇರಿ ಬೆಸಿಲಿಕಾ ಇತರರು ಭಾಗವಹಿಸಿದ್ದರು.

key words : Protest-against-cancellation-cultural-program-dasara