ನವದೆಹಲಿ,ಜನವರಿ,07,2021(www.justkannada.in) : ದೆಹಲಿ ಗಡಿಯಲ್ಲಿ ನೂತನ ಕೃಷಿ ಕಾನೂನು ಜಾರಿಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೋವಿಡ್ 19 ಸೋಂಕು ಹರಡದಿರುವಂತೆ ಕ್ರಮ ತೆಗೆದುಕೊಳ್ಳಲಾಗಿದೆಯೆ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಪ್ರಶ್ನಿಸಿದೆ.
ಆನಂದ್ ವಿಹಾರ್ ಬಸ್ ಟರ್ಮಿನಲ್ ಮತ್ತು ರಾಷ್ಟ್ರ ರಾಜಧಾನಿಯ ನಿಜಮ್ಮುದ್ದೀನ್ ಮರ್ಕಜ್ ನಲ್ಲಿ ತಬ್ಲಿಘಿ ಜಮಾಅತ್ ಸಭೆ ವಿಷಯದ ಬಗೆಗೆ ಸಿಬಿಐ ತನಿಖೆ ಸೇರಿದಂತೆ ವಿವಿಧ ಆದೇಶವನ್ನು ಕೋರಿ ಮೇಲ್ಮನವಿ ವಿಚಾರಣೆ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಕುರಿತಂತೆ ಆತಂಕ ವ್ಯಕ್ತಪಡಿಸಿದೆ.
ರೈತರ ಪ್ರತಿಭಟನೆಯಲ್ಲಿ ಇದೇ ಸಮಸ್ಯೆ ಉದ್ಭವಿಸಲಿದೆ. ರೈತರನ್ನು ಕೋವಿಡ್ನಿಂದ ರಕ್ಷಿಸಲಾಗಿದೆಯೆ ಎಂದು ನಮಗೆ ಅರಿವಿಲ್ಲ. ಆದ್ದರಿಂದ, ಮುಂದಿನ ದಿನಗಳಲ್ಲಿ ಸಮಸ್ಯೆ ಉದ್ಭವಿಸಲಿದೆ. ಎಲ್ಲವೂ ಸರಿಯಾಗಿ ಮುಗಿದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ಅರ್ಜಿಗಳ ವಿಚಾರಣೆ ನಡೆಸಿತ್ತು. ಈ ವೇಳೆ ಪ್ರತಿಭಟನಾ ನಿರತ ರೈತರನ್ನು ಕೋವಿಡ್ -19 ನಿಂದ ರಕ್ಷಿಸಲಾಗಿದೆಯೇ ಎಂದು ಕೇಂದ್ರಕ್ಕೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಉನ್ನತ ನ್ಯಾಯಾಲಯ ಕೇಳಿದೆ ಎಂದು ತಿಳಿದು ಬಂದಿದೆ.
ಇದಕ್ಕೆ ಮೆಹ್ತಾ “ಇಲ್ಲ” ಎಂದು ಪ್ರತಿಕ್ರಿಯಿಸಿದ್ದು, ಏನು ಕ್ರಮ ತೆಗೆದುಕೊಳ್ಳಲಾಗಿದೆ, ಏನನ್ನು ಮಾಡಬೇಕಿದೆ ಎಂಬುದರ ಕುರಿತು ಎರಡು ವಾರಗಳಲ್ಲಿ ವರದಿ ಸಲ್ಲಿಸುತ್ತೇನೆ ಎಂದು ಮೆಹ್ತಾ ಹೇಳಿದ್ದಾರೆ.
ನ್ಯಾಯವಾದಿ ಸುಪ್ರಿಯಾ ಪಂಡಿತ ಸಲ್ಲಿಸಿದ್ದ ಮನವಿಯಲ್ಲಿ, ದೆಹಲಿ ಪೊಲೀಸರು ಜನರ ಗುಂಪನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ನಿಜಾಮುದ್ದೀನ್ ಮರ್ಕಜ್ ಮುಖ್ಯಸ್ಥ ಮೌಲಾನಾ ಸಾದ್ ಇನ್ನೂ ಬಂಧಿಸಲ್ಪಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಅರ್ಜಿದಾರರ ಪರ ಹಾಜರಾದ ವಕೀಲ ಓಂ ಪ್ರಕಾಶ್ ಪರಿಹಾರ್, ಮೌಲಾನಾ ಸಾದ್ ಇರುವ ಸ್ಥಳದ ಬಗ್ಗೆ ಕೇಂದ್ರವು ಯಾವುದೇ ಹೇಳಿಕೆ ನೀಡಿಲ್ಲ ಎಂದು ಹೇಳಿದರು.
ನ್ಯಾಯಪೀಠ ಪರಿಹಾರ್ಗೆ, ನೀವು ಒಬ್ಬ ವ್ಯಕ್ತಿಯ ಬಗ್ಗೆ ಏಕೆ ಆಸಕ್ತಿ ತೋರಿದ್ದೀರಿ?ನಾವಿಂದು ಕೋವಿಡ್ ಸುಳಿಯಲ್ಲಿದ್ದೇವೆ. ನೀವು ವಿವಾದವನ್ನು ಏಕೆ ಬಯಸುತ್ತೀರಿ? ಕೋವಿಡ್ ಮಾರ್ಗಸೂಚಿ ಜಾರಿಯಲ್ಲಿರಬೇಕೆಂದು ನಾವು ಹೇಳುತ್ತೇವೆ ಎಂದಿದೆ.ಈ ವಿಷಯದಲ್ಲಿ ಉನ್ನತ ನ್ಯಾಯಾಲಯ ಔಪಚಾರಿಕ ನೋಟಿಸ್ ಜಾರಿಗೊಳಿಸಿದ ನಂತರ ಈ ವಿಷಯದಲ್ಲಿ ವರದಿ ಸಲ್ಲಿಸುವುದಾಗಿ ಮೆಹ್ತಾ ಹೇಳಿದ್ದಾರೆ.
key words : Protestant-farmers-Corona-infection-Without-spreading-Action
Taken?-center-supreme Question …!