ದಲಿತ ಯುವಕನ ಕೊಲೆ ಖಂಡಿಸಿ ದಸಂಸದಿಂದ ಪ್ರತಿಭಟನೆ

ಮೈಸೂರು, ಆಗಸ್ಟ, 31, 2020(www.justkannada.in) ;  ದೇವಾಲಯದ ಆವರಣದಲ್ಲಿ ಕುಳಿತಿದ್ದನೆಂಬ ಕಾರಣಕ್ಕೆ ದಲಿತ ಯುವಕನ ಕೊಲೆ ನಡೆಸಿರುವುದು ಖಂಡನೀಯ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

jk-logo-justkannada-logo

ನಗರದ ಪುರಭವನದ ಎದುರು ಸೋಮವಾರ ಜಮಾವಣೆಗೊಂಡ ಪ್ರತಿಭಟನಾಕಾರರು ತಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.

Protest,Dasamsa,condemning,murder,Dalit,young

ದಸಂಸ ರಾಜ್ಯ ಸಂಚಾಲಕ ಹರಿಹರ ಆನಂದಸ್ವಾಮಿ ಮಾತನಾಡಿ, ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೂದಿಹಾಳ ಪಿ.ಎಚ್.ಗ್ರಾಮದಲ್ಲಿ ದೇವಸ್ಥಾನದ ಕಟ್ಟೆಯ ಮೇಲೆ ಸವರ್ಣೀಯರ ಸಮನಾಗಿ ಕುಳಿತಿದ್ದನೆಂಬ ಕಾರಣಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಕೊಲೆ ಮಾಡಿದ ಪ್ರಕರಣ ಅತ್ಯಂತ ಅಮಾನವೀಯ ಎಂದು ಆಕ್ರೋಶವ್ಯಕ್ತಪಡಿಸಿದರು.

ಹಾಡುಹಗಲೇ ಮೇಲ್ವರ್ಗದ ವ್ಯಕ್ತಿಗಳಿಂದ ದಲಿತ ಯುವ ಮುಖಂಡನ ಬರ್ಬರ ಹತ್ಯೆ ನಡೆದಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಂತಹ ಘಟನೆ ನಡೆದಿದ್ದರೂ ಜನಪ್ರತಿನಿಧಿಗಳು ಮೌನದಿಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ನಿರಂತರವಾಗಿ ಒಂದಲ್ಲ,ಒಂದು ಕಡೆಯಲ್ಲಿ ದಲಿತರ ಮೇಲೆ ಹಲ್ಲೆ, ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆಯಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಸರ್ಕಾರದ ಆಡಳಿತ ವೈಫಲ್ಯ ಹಾಗೂ ನಿರ್ಲಕ್ಷ್ಯವೇ ಕಾರಣ ಎಂದು ಬೇಸರವ್ಯಕ್ತಪಡಿಸಿದರು.

ಆಧುನಿಕತೆಯ ನಾಗಾಲೋಟದಲ್ಲಿ ಮುಂದುವರಿಯುತ್ತಿರುವ ಇಂತಹ ಸಮಯದಲ್ಲೂ  ಇನ್ನೂ ಕೂಡ ದಲಿತರು ಹಾಗೂ ದಲಿತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಳನ್ನು ಖಂಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಡಾ.ಅಲಗೂಡು ಚಂದ್ರಶೇಖರ್, ಎಸ್.ನಾಗರಾಜು, ಡಿ.ಎನ್.ಬಾಬು, ಅಶೋಕಪುರಂ ಕೃಷ್ಣ, ಮಹಾದೇವ, ಚಕ್ರಪಾಣಿ ಇತರರು ಭಾಗವಹಿಸಿದ್ದರು.

key words ; Protest-Dasam-condemning-murder-Dalit-young