ಮೈಸೂರು,ಅಕ್ಟೊಂಬರ್,02,2020(www.justkannada.in) : ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮೇಲೆ ಪೊಲೀಸರು ಕೈ ಮಾಡಿರುವುದು ಖಂಡಿಸಿ ಹಾಗೂ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದು ರಾಹುಲ್ ಗಾಂಧಿ ಅಭಿಮಾನಿ ಬಳಗದ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.ನಗರದ ನ್ಯಾಯಾಲಯ ಮುಂಭಾಗದ ಗಾಂಧಿ ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಕಾರರು ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಕಾಂಗ್ರೆಸ್ ಯುವ ಮುಖಂಡ ಎನ್.ಎಂ.ನವೀನ್ ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಬೇಟಿ ಬಚಾವೊ, ಬೇಟಿ ಪಡಾವ್ ಎಂಬ ಘೋಷಣೆ ಕೊಟ್ಟರು. ಆದರೆ ಉತ್ತರ ಪ್ರದೇಶದಲ್ಲಿ ಯೋಗಿ ಅವರ ಸರ್ಕಾರ ಬೊಗಳೆ ಸರ್ಕಾರವಾಗಿದೆ ಎಂದು ಕಿಡಿಕಾರಿದರು.
ಗೂಂಡಾ ರಾಜ್ಯವಾದ ಉತ್ತರ ಪ್ರದೇಶದಲ್ಲಿ ರಾಹುಲ್, ಪ್ರಿಯಾಂಕಾ ಗಾಂಧಿ ಅವರಿಗೆ ರಕ್ಷಣೆ ಸಿಗುವುದಿಲ್ಲ. ಸಾಮಾನ್ಯ ಜನರಿಗೆ ಹೇಗೆ ರಕ್ಷಣೆ ಸಿಕ್ಕಿತ್ತು? ಇದನ್ನು ಎಲ್ಲ ನಾಗರಿಕರು ಒಕ್ಕೂರಲಿನಿಂದ ಖಂಡಿಸಬೇಕು ಎಂದರು.
ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ 19ವರ್ಷದ ದಲಿತ ಯುವತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವು ನಾಗರಿಕ ಸಮಾಜ ತಲೆತಗ್ಗಿಸುವ ಹೇಯ ಕೃತ್ಯ. ಈ ಪ್ರಕರಣದಲ್ಲಿ ಅಪರಾಧಿಗಳ ಪರವಾಗಿ ಕರ್ತವ್ಯ ನಿರ್ವಹಿಸಿರುವ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಸರ್ಕಾರವು ಕ್ರಮಕೈಗೊಳ್ಳಬೇಕು. ಈ ಘಟನೆಯನ್ನು ಜಾತ್ಯತೀತವಾಗಿ ಎಲ್ಲರೂ ಖಂಡಿಸಬೇಕು ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಸರಣಿ ಅತ್ಯಾಚಾರಗಳು, ಕೊಲೆಗಳು ನಡೆಯುತ್ತಿದ್ದರೂ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೂಡಲೇ ರಾಷ್ಟ್ರಪತಿಗಳು ಸರ್ಕಾರವನ್ನು ವಜಾ ಮಾಡಬೇಕ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯುವ ಮುಖಂಡ ವಿನಯ್ ಕಣಗಾಲ್, ಕಿರಣ್,ಸುನೀಲ್, ಹರೀಶ್,ನವೀನ್ ಇನ್ನೀತರರು ಭಾಗವಹಿಸಿದ್ದರು.
key words : Protest-demanding-execution-rapists