ಮೈಸೂರು,ಸೆಪ್ಟೆಂಬರ್,24,2020(www.justkannada.in) : ಕೋವಿಡ್-19 ಲಾಕ್ ಡೌನ್ ಸಂತ್ರಸ್ಥರಿಗೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಂಟರ್ ಆಫ್ ಟ್ರೇಡ್ ಯೂನಿಯನ್ಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗುರುವಾರ ಜಮಾವಣೆಗೊಂಡ ಪ್ರತಿಭಟನಕಾರರು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ ಮಾತನಾಡಿ, ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕತೆಯು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯದ ಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ರೈತರು, ಇತರೆ ಎಲ್ಲಾ ವಿಭಾಗದ ಜನತೆಯು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.
ಲಾಕ್ ಡೌನ್ ಅವಧಿಯಲ್ಲಿ ಪೂರ್ಣ ವೇತನ ಸಿಗದೆ ಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಘಟಿತ ಕಾರ್ಮಿಕರಿಗೆ ಘೋಷಿತ ಪರಿಹಾರ ಪೂರ್ಣ ಪ್ರಮಾಣದಲ್ಲಿ ದೊರಕಿಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಜಿಡಿಪಿಯ ಕನಿಷ್ಠ ಶೇ.3ರಷ್ಟು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವಂತೆ ಒತ್ತಾಯಿಸಿದರು.
ಕೋವಿಡ್-19 ಪಿಡುಗಿನ ವಿರುದ್ಧ ವೈದ್ಯರು, ಶೂಶ್ರೂಷಕಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಗ್ರಾ.ಪಂ.ನೌಕರರು, ಪೊಲೀಸ್, ಸಾರಿಗೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು,ಪೌರಕಾರ್ಮಿಕರು ದುಡಿಯುತ್ತಿದ್ದು ಅವರಿಗೆ ಸಮರ್ಪಕ ಪಿಪಿಇ ಕಿಟ್, ಆರೋಗ್ಯ ವಿಮೆ, ಪ್ರೋತ್ಸಾಹಧನ, ಉಚಿತ ತಪಾಸಣೆ, ಯೋಜನಾ ಕಾರ್ಮಿಕರಿಗೆ ಗೌರವಧನ ಪಾವತಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯೂನಿಯನ್ ನ ಅನೇಕ ಸದಸ್ಯರು ಭಾಗವಹಿಸಿದ್ದರು.
key words : Protest-demanding-relief-victims