ಮೈಸೂರು,ಅಕ್ಟೋಬರ್,09,2020(www.justkannada.in) : ಸಿ ಡಿ ಸಿ, ಹೊರಗುತ್ತಿಗೆ ಡಿ ಗ್ರೂಫ್ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಮತ್ತು ಇತರೆ ಸೌಲಭ್ಯಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳ ಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮೈಸೂರು, ಹುಣಸೂರು ರಸ್ತೆಯಲ್ಲಿರುವ ಉನ್ನತ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಎದುರು ಶುಕ್ರವಾರ ಜಮಾಣೆಗೊಂಡ ಪ್ರತಿಭಟನಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಎಐಟಿಯುಸಿಯ ರಾಜ್ಯ ಸಂಚಾಲಕ ಚಂದ್ರಶೇಖರ್ ಮೇಟಿ ಮಾತನಾಡಿ, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಸಿ ಡಿ ಸಿ, ಗುತ್ತಿಗೆ, ಹೊರಗುತ್ತಿಗೆ ಮತ್ತು ಅನ್ ಸ್ಕಿಲ್ಡ್ ಹೆಸರಿನಲ್ಲಿ ಡಿ ಗ್ರೂಪ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಗಳಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಶಾಸನಬದ್ಧವಾಗಿ ಸಿಗಬೇಕಾದ ಕನಿಷ್ಠ ವೇತನವೂ ಇಲ್ಲದೆ ಕಳೆದ 12-15ವರ್ಷಗಳಿಂದಲೂ ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.
ಈ ಸೇವೆಯಲ್ಲಿ ಕಾರ್ಯನಿರತರಾಗಿರುವ ಕಾರ್ಮಿಕರಲ್ಲಿ ಹೆಚ್ಚಿನವರು ಶೋಷಿತ ಸಮುದಾಯದ ಮಹಿಳೆಯರಾಗಿದ್ದು, ತಮ್ಮ ಹಾಗೂ ಕುಟುಂಬಗಳ ನಿರ್ವಹಣೆಗಾಗಿ ಹಲವಾರು ವರ್ಷಗಳಿಂದ ಕೆಲಸವು ಖಾಯಂ ಆಗಬಹುದೆಂಬ ನಿರೀಕ್ಷೆಯಲ್ಲಿ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಕನಿಷ್ಠ ವೇತನ ನೀಡದೆ 15ವರ್ಷಗಳಿಂದಲೂ ಶೋಷಣೆ ಮಾಡುತ್ತಾ ಬಂದಿರುವುದು ವಿಷಾದನೀಯ ಎಂದರು.
ಇಲಾಖಾ ವ್ಯಾಪ್ತಿಯ ಕಾಲೇಜುಗಳಲ್ಲಿ ನಡೆಯುತ್ತಿರುವ ಅನ್ ಫೇರ್ ಲೇಬರ್ ಪ್ರಾಕ್ಟೀಸ್ ನ್ನು ಕೂಡಲೇ ತಡೆಗಟ್ಟಲು ಸೂಕ್ತ ಕ್ರಮ ವಹಿಸಬೇಕು. ಶಾಸನ ಬದ್ಧವಾಗಿ ಕಾರ್ಮಿಕರಿಗೆ ನೀಡಬೇಕಾದ ಎಲ್ಲಾ ಕನಿಷ್ಠ ಸೌಲಭ್ಯಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಶಾಸನಬದ್ಧವಾಗಿ ನೀಡಬೇಕಾದ ಎಲ್ಲಾ ಕನಿಷ್ಠ ಸೌಲಭ್ಯಗಳನ್ನು ಕೂಡಲೇ ಜಾರಿ ಮಾಡಬೇಕು. ಕಾರ್ಮಿಕ ಇಲಾಖೆಯು 2017ರಂದು ವೇತನ ಪಾವತಿ ಕುರಿತಂತೆ ಮಾಡಿರುವ ಅಧಿಸೂಚನೆ ಅನ್ವಯ ಇಲ್ಲಿಯವರೆಗಿನ ವ್ಯತ್ಯಾಸದ ಹಿಂಬಾಕಿ ವೇತನವನ್ನು ಪ್ರತಿಯೊಬ್ಬ ಕಾರ್ಮಿಕರಿಗೂ ಪಾವತಿಸಬೇಕು. ಲಾಕ್ ಡೌನ್ ಅವಧಿಯಿಂದ ಅಕ್ಟೋಬರ್ ತಿಂಗಳವರೆಗೂ ವೇತನವನ್ನು ಎಲ್ಲಾ ಕಾರ್ಮಿಕರಿಗೂ ಪಾವತಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣ, ಪುಟ್ಟರಾಜು, ಮೀನಾಕ್ಷಿ, ಇಂದಿರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
key words : Protest-meet-many-demands-including-wages