ಮೈಸೂರು,ಅಕ್ಟೊಂಬರ್,01,2020(www.justkannada.in) : ಐಎಎಸ್ ಅಧಿಕಾರಿ ಬಿ.ಶರತ್ ಅವರನ್ನೇ ಮೈಸೂರು ಜಿಲ್ಲಾಧಿಕಾರಿಯಾಗಿ ಮುಂದುವರಿಸುವಂತೆ ಒತ್ತಾಯಿಸಿ ಮಾಜಿ ಉಪಮೇಯರ್ ಶೈಲೆಂದ್ರ ಭೀಮರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಪುರಭವನದ ಎದುರು ಗುರುವಾರ ಜಮಾವಣೆಗೊಂಡ ಪ್ರತಿಭಟನಕಾರರು ಬಿ.ಶರತ್ ಅವರನ್ನೆ ಜಿಲ್ಲಾಧಿಕಾರಿಗಳಾಗಿ ಮುಂದುವರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಬಿ.ಶರತ್ ವರ್ಗಾವಣೆ ದಲಿತ ಜನಾಂಗಕ್ಕೆ ಮಾಡಿದ ಮೋಸ
ಈ ಸಂದರ್ಭ ಶೈಲೆಂದ್ರ ಭೀಮರಾವ್ ಮಾತನಾಡಿ, ಐಎಎಸ್ ಅಧಿಕಾರಿ ಬಿ.ಶರತ್ ವರ್ಗಾವಣೆ ದಲಿತ ಜನಾಂಗಕ್ಕೆ ಮಾಡಿದ ಮೋಸವಾಗಿದೆ. ದಲಿತ ಜನಾಂಗದ ಮೇಲೆ ಪ್ರೀತಿ, ವಿಶ್ವಾಸ ಇದ್ದರೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಆದೇಶ ರದ್ದುಪಡಿಸಿ, ಕೂಡಲೇ ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಬಿ.ಶರತ್ ಮೈಸೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲವೇ? ಓರ್ವ ದಲಿತ ಜನಾಂಗದ ವ್ಯಕ್ತಿ ಮೈಸೂರು ಜಿಲ್ಲಾಧಿಕಾರಿಯಾಗಿ ವಿಶ್ವವಿಖ್ಯಾತ ಮೈಸೂರು ದಸರಾ ಮುನ್ನಡೆಸುವ ಹಾಗೂ ಕರ್ತವ್ಯವನ್ನು ನಿರ್ವಹಿಸಬಾರದೇ ಎಂದು ಪ್ರಶ್ನಿಸಿದರು.
ದಸರಾಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಈ ವರ್ಗಾವಣೆಯ ಅವಶ್ಯಕತೆ ಏನಿದೆ? ಈ ವರ್ಗಾವಣೆಯ ಹಿಂದೆ ಏನಿದೆ ಎಂಬುದು ಮೈಸೂರು ಜನತೆಗೆ ತಿಳಿದಿದೆ. ಓರ್ವ ಶೋಷಿತ ದಲಿತ ವರ್ಗದ ಜವಾಬ್ದಾರಿಯುತ ಜಿಲ್ಲಾಧಿಕಾರಿಗಳ ಸೇವೆ ಮೈಸೂರು ಜನತೆಗೆ ಬೇಡವೇ? ಕನ್ನಡಿಗರಾದ ಶರತ್ ಅವರನ್ನು ವರ್ಗಾವಣೆ ಮಾಡಿ ಆಂಧ್ರಪ್ರದೇಶ ಮೂಲದ ಮಹಿಳೆಗೆ ಅವಕಾಶ ಕೊಟ್ಟಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ವರ್ಗಾವಣೆ ಹೆಸರಿನಲ್ಲಿ ರಾಜ್ಯ ಸರ್ಕಾರದಿಂದ ಹಗಲು ದರೋಡೆ
ಈ ವರ್ಗಾವಣೆ ಹೆಸರಿನಲ್ಲಿ ರಾಜ್ಯ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಇಂತಹ ಅವೈಜ್ಞಾನಿಕ ವರ್ಗಾವಣೆ ಮಾಡುವುದನ್ನು ನಿಲ್ಲಿಸಬೇಕು. ಇದು ಓರ್ವ ದಕ್ಷ ದಲಿತ ಅಧಿಕಾರಿಗೆ ಮಾಡಿದ ಅಪಮಾನ, ದಲಿತ ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ. ನಿಮಗೇನಾದರೂ ದಲಿತರ ಬಗ್ಗೆ ಕಿಂಚಿತ್ ಕಾಳಜಿ ಇದ್ದರೆ ಕೂಡಲೇ ರೋಹಿಣಿ ಸಿಂಧೂರಿ ಅವರ ಆದೇಶವನ್ನು ರದ್ದುಪಡಿಸಿ ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಮುಂದುವರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಡಿ.ಪ್ರವೀಣ್ ಕುಮಾರ್, ಶಿವು, ಪ್ರಶಾಂತ್ ಇನ್ನೀತರರು ಭಾಗವಹಿಸಿದ್ದರು.
key words : Protest-pursue-B.Sharat-District-Collector