ಮೈಸೂರು,ಆ,20,2020(www.justkannada.in): ಮೇಲಾಧಿಕಾರಿಗಳಿಂದ ಕಿರುಕುಳ ಎಂದು ಆರೋಪಿಸಿ ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆಗೆ ಶರಣಾದ ಹಿನ್ನೆಲೆ ಮೈಸೂರು ಡಿಎಚ್ ಒ ಕಚೇರಿ ಎದುರು ಶವವಿಟ್ಟು ವೈದ್ಯರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಂದ್ರ (43) ಆತ್ಮಹತ್ಯೆಗೆ ಶರಣಾಗಿದ್ದು ಈ ಹಿನ್ನೆಲೆ, ಮೈಸೂರು ಡಿಎಚ್ ಒ ಕಚೇರಿ ಎದುರು ಮೃತ ಟಿಎಚ್ ಒ ಶವವಿಟ್ಟು ವೈದ್ಯ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು. ಇದೇ ವೇಳೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಮಿಶ್ರಾಗೆ ಪ್ರತಿಭಟನಾನಿರತ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ತರಾಟೆ ತೆಗೆದುಕೊಂಡರು.
ಅಧಿಕಾರಿಗಳಿಗೆ ಏಕವಚನದಲ್ಲಿ ತರಾಟೆ ತೆಗೆದುಕೊಂಡ ವೈದ್ಯರ ಸಂಘದ ಅಧ್ಯಕ್ಷ ಡಾ.ರವೀಂದ್ರ, ಶೇ.60ರಷ್ಟು ಹುದ್ದೆಗಳು ಖಾಲಿ ಇವೆ. ಹೀಗಿರುವಾಗ ಹೇಗೆ ಕೆಲಸ ಮಾಡಬೇಕು. ವೈದ್ಯರನ್ನು ಸವತಿ ಮಕ್ಕಳಂತೆ ನೋಡುತ್ತೀರಿ. ವೈದ್ಯರು ಮತ್ತು ಸಿಬ್ಬಂದಿಗಳು ಆರು ತಿಂಗಳಿಂದ ಮನೆ ಬಿಟ್ಟು ಕೆಲಸ ಮಾಡಿದ್ದಾರೆ. ಜತೆಗೆ ಆ್ಯಂಟಿಜನ್ ಕಿಟ್ ಟೆಸ್ಟಿಂಗ್ ಮಾಡುವಂತೆ ಅವರಿಗೆ ಟಾರ್ಗೆಟ್ ಕೊಟ್ಟಿದ್ದೀರಿ. ಇಂತಹ ಒಳ್ಳೆಯ ಡಾಕ್ಟರ್ ಗೂ ಬೈಯ್ಯುವ ಮೂಲಕ ಕೊಲೆ ಮಾಡಿದ್ದೀರಿ ಎಂದು ಏರುಧನಿಯಲ್ಲೇ ತರಾಟೆ ತೆಗೆದುಕೊಂಡರು.
ಇನ್ನು ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಸಸ್ಪೆಂಡ್ ಮಾಡಬೇಕು. ಅಲ್ಲಿವರೆಗೂ ನಾವು ಕೆಲಸ ಮಾಡಲ್ಲ ಎನ್ನುವ ಮೂಲಕ ಕರ್ತವ್ಯ ಬಹಿಷ್ಕರಿಸುವುದಾಗಿ ಎಂದು ಆಗ್ರಹಿಸಿದ ಆರೋಗ್ಯ ಸಿಬ್ಬಂದಿ ಎಚ್ಚರಿಕೆ ನೀಡಿದರು.
Key words: protests DHO office – Mysore-doctor –death – health- officer