ಮೈಸೂರು,ಮೇ,31,2022(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಸಾಲು ಸಾಲು ಪ್ರತಿಭಟನೆಗಳು ನಡೆದವು. ರೈತ ನಾಯಕ ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡನೆ, ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರುಷ್ಕರಣಾ ಸಮಿತಿ ರದ್ದು ಪಡಿಸುವಂತೆ ಆಗ್ರಹ ಸೇರಿ ಹಲವು ವಿಚಾರಗಳಿಗೆ ಇಂದು ಪ್ರತಿಭಟನೆ ನಡೆಯಿತು.
ರೈತ ನಾಯಕ ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಮೈಸೂರಿನ ಡಿಸಿ ಕಚೇರಿ ಬಳಿ ರೈತ, ಪ್ರಗತಿಪರ, ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪ್ರತಿಭಟನೆಯಲ್ಲಿ ಚಿಂತಕ ಪ್ರೊ.ಕೆ.ಎಸ್.ಭಗವಾನ್, ಕಾಳೆಗೌಡ ನಾಗವಾರ, ರೈತ ಮುಖಂಡ ಹೊಸಕೊಟೆ ಬಸವರಾಜ್ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು. ರಾಜ್ಯ, ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಹಾಗೆಯೇ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರುಷ್ಕರಣಾ ಸಮಿತಿ ರದ್ದು ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ರೋಹಿತ್ ಚಕ್ರತೀರ್ಥ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪಠ್ಯ ಪರಿಷ್ಕರಣಾ ಸಮಿತಿ ಖಂಡನಾರ್ಹ ಬದಲಾವಣೆ ಮಾಡಿದೆ. ಇದು ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಈ ಕೂಡಲೆ ಸರ್ಕಾರ ಈ ಸಮಿತಿ ವಜಾ ಮಾಡಬೇಕು. ಪ್ರೊ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಸಮಿತಿ ಪರಿಷ್ಕರಣೆ ಪಠ್ಯವನ್ನೇ ಮುಂದುವರೆಸುವಂತೆ ಆಗ್ರಹಿಸಿದರು.
ಸಿದ್ದರಾಮಯ್ಯ ವಿರುದ್ದ ಸಂಸದ ಪ್ರತಾಪ್ ಸಿಂಹ ಅವಹೇಳನ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ.
ಇನ್ನು ಸಿದ್ದರಾಮಯ್ಯ ವಿರುದ್ದ ಸಂಸದ ಪ್ರತಾಪ್ ಸಿಂಹ ಅವಹೇಳನ ಖಂಡಿಸಿ ಮೈಸೂರಿನ ದಾಸಪ್ಪ ವೃತ್ತದಲ್ಲಿ ಎನ್ ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಂಸದ ಪ್ರತಾಪ್ ಸಿಂಹ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪ್ರತಾಪ್ ಸಿಂಹ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಇದೇ ರೀತಿ ಅವಹೇಳನ ಹೇಳಿಕೆ ನೀಡಿದ್ರೆ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಪೆಟ್ರೋಲ್ ಪೂರೈಕೆಯಲ್ಲಿನ ವೈಫಲ್ಯ ಖಂಡಿಸಿ ಧರಣಿ.
ಪೆಟ್ರೋಲ್ ಪೂರೈಕೆಯಲ್ಲಿನ ವೈಫಲ್ಯಕ್ಕೆ ಖಂಡನೆ ವ್ಯಕ್ತಪಡಿಸಿ ಪೆಟ್ರೋಲ್ ಬಂಕ್ ಮಾಲೀಕರು ಪ್ರತಿಭಟನೆ ನಡೆಸಿದರು. ಮೇಟಗಳ್ಳಿಯಲ್ಲಿರುವ ಭಾರತ್ ಪೆಟ್ರೋಲಿಯಂ ಡಿಪೋ ಬಳಿ ಕೈಗೆ ಕಪ್ಪುಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ 1 ರೂ. ಕಮಿಷನ್ ನೀಡಬೇಕೆಂದು ಆಗ್ರಹಿಸಿದರು. ಪೆಟ್ರೋಲ್ ಪೂರೈಕೆಯಲ್ಲಿನ ವೈಫಲ್ಯದಿಂದ ತೊಂದರೆಗೆ ಸಿಲುಕಿದ್ದೇವೆ. ಏಕಾಏಕಿ ಪೆಟ್ರೋಲ್ ದರ ಇಳಿಕೆಯಿಂದ ಮಾಲೀಕರಿಗೆ ನಷ್ಟವಾಗ್ತಿದೆ ಎಂದು ಕಿಡಿ ಕಾರಿದರು.
Key words: protests – Mysore-nsui- Petrol –bunk- owners