ಮೈಸೂರು,ಜು,18,2020(www.justkannada.in): ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ ಇದೀಗ ನಿರ್ಬಂಧವನ್ನ ಈ ಸೋಮವಾರಕ್ಕೂ ವಿಸ್ತರಿಸಿದೆ.
ಇದೇ ಜುಲೈ 20 ರಂದು ಚಾಮುಂಡಿ ಬೆಟ್ಟಕ್ಕೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನಿರ್ಬಂಧ ವಿಧಿಸಿದ್ದು ಹೀಗಾಗಿ ಚಾಮುಂಡಿಬೆಟ್ಟಕ್ಕೆ ಈ ಸೋಮವಾರ ಕೂಡ ಸಾರ್ವನಿಕರಿಗೆ ಪ್ರವೇಶ ಇಲ್ಲ. ತುರ್ತು ಹಾಗೂ ಗ್ರಾಮಸ್ಥರ ವಾಹನಗಳ ಹೊರತುಪಡಿಸಿ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಪ್ರವೇಶ ಬಂದ್ ಆಗಿರುತ್ತದೆ.
ಈ ಕುರಿತು ಚಾಮುಂಡೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ. ಮೈಸೂರು ಜಿಲ್ಲಾಡಳಿತ ಪ್ರತೀ ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದೆ. ಆಷಾಢ ಶುಕ್ರವಾರದ ಜೊತೆಗೆ ಶನಿವಾರ ಮತ್ತು ಭಾನುವಾರವೂ ಸಹ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದ್ದು ಇದೀಗ ಅದನ್ನ ಜುಲೈ 20 ರ ಸೋಮವಾರಕ್ಕೆ ನಿರ್ಬಂಧ ವಿಸ್ತರಿಸಿದೆ.
ಉತ್ತನಹಳ್ಳಿ ಮಾರಮ್ಮನ ದೇವಸ್ಥಾನಕ್ಕೂ ಇದೇ ನಿಯಮ ಅನ್ವಯವಾಗಲಿದೆ. ಈ ಮೂಲಕ ಉತ್ತನಹಳ್ಳಿ ಮಾರಮ್ಮ ದೇವಸ್ಥಾನದ ವತಿಯಿಂದ ದಾನಿಗಳಿಂದ ಪ್ರಸಾದ ತಯಾರಿಗೆ ಮತ್ತು ವಿತರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇನ್ನು ಮಂಗಳವಾರ ಸಾರ್ವಜನಿಕರಿಗೆ ಚಾಮುಂಡೇಶ್ವರಿ ದೇವಾಲಯ ಎಂದಿನಂತೆ ತೆರೆಯಲಿದ್ದು ಭಕ್ತರು ಭೇಟಿ ನೀಡಬಹುದು.
Key words: Public – Restriction- Mysore -Chamundi Hill -Monday.