ಬೆಂಗಳೂರು,ಮಾರ್ಚ್,18,2023(www.justkannada.in): ಬೆಂಗಳೂರು ಮಹಾನಗರದ ಜನತೆಗೆ 1895ರಿಂದ ಇಲ್ಲಿಯವರೆಗೆ ನೀರು ಪೂರೈಸಲು ಕಾಲಕಾಲಕ್ಕೆ ಅಳವಡಿಸಿಕೊಂಡು ಬಂದಿರುವ ವ್ಯವಸ್ಥೆ ಮತ್ತು ತಂತ್ರಜ್ಞಾನಗಳನ್ನು ಸಮಗ್ರವಾಗಿ ಪ್ರದರ್ಶಿಸುವ ವಿನೂತನ ನೀರು ವಸ್ತು ಸಂಗ್ರಹಾಲಯ ಲೋಕಾರ್ಪಣೆಗೊಂಡಿತು.
ದಿ. ನಟ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಜಲಮಂಡಲಿಯ ನೆಲ ಮಟ್ಟದ ನೀರು ಸಂಗ್ರಹಗಾರದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಈ ಮ್ಯೂಸಿಯಂಗೆ ಹಸಿರು ನಿಶಾನೆ ತೋರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಮಾಜದ ಬಗ್ಗೆ ಕಳಕಳಿ ಇಟ್ಟುಕೊಂಡಿದ್ದ ನಟ ಪುನೀತ್ ಅವರು ನಮಗೆಲ್ಲ ಸ್ಫೂರ್ತಿಯಾಗಬೇಕು. ಅವರ ಗೌರವಾರ್ಥವಾಗಿ ಅವರ ಹುಟ್ಟುಹಬ್ಬದಂದೇ ಈ ಮ್ಯೂಸಿಯಂ ಅನ್ನು ಸಮಾಜಕ್ಕೆ ಅರ್ಪಿಸಲಾಗಿದೆ” ಎಂದು ನೆನಪಿಸಿಕೊಂಡರು.
ದೆಹಲಿಯಲ್ಲಿರುವ ಇಂಡಿಯಾ ಹ್ಯಾಬಿಟೆಟ್ ಸೆಂಟರ್ ರೀತಿಯಲ್ಲೇ ಮಲ್ಲೇಶ್ವರ ಇಂಟರ್ ನ್ಯಾಷನಲ್ ಸೆಂಟರ್ ನಿರ್ಮಿಸಲಾಗುವುದು. ಇದಕ್ಕಾಗಿ ಬಿಬಿಎಂಪಿ 20 ಕೋಟಿ ರೂ. ಕೊಡಲಿದ್ದು, ಜಲಮಂಡಲಿಯು ಅಗತ್ಯವಾದ ಜಾಗವನ್ನು ಕೊಡಲಿದೆ. ಇದು ಯುವಜನರು ಸಮರ್ಪಕ ಚಿಂತನೆ ರೂಪಿಸಿಕೊಳ್ಳುವಂತಹ ತಾಣವಾಗಲಿದೆ ಎಂದು ಅವರು ಹೇಳಿದರು.
6.81 ಕೋಟಿ ರೂ. ವೆಚ್ಚದಲ್ಲಿ ಈಗ ನಿರ್ಮಿಸಿರುವ ಮ್ಯೂಸಿಯಂನಲ್ಲಿ ಬೆಂಗಳೂರು ನಗರದ ನೀರು ಪೂರೈಕೆ ಸೌಲಭ್ಯದ ಇತಿಹಾಸವನ್ನು ಮೆಲುಕುಹಾಕುವಂತಿದೆ. ಮುಖ್ಯವಾಗಿ ವಿದ್ಯಾರ್ಥಿಗಳು, ರೈತರು, ಇಂಜಿನಿಯರುಗಳು ಮತ್ತು ಸಾರ್ವಜನಿಕರಿಗೆ ನೀರಿನ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಲು ಇದು ನೆರವಾಗಲಿದೆ ಎಂದು ಅವರು ನುಡಿದರು.
ನೀರಿನ ವೈಜ್ಞಾನಿಕ ನಿರ್ವಹಣೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಅತ್ಯಗತ್ಯವಾಗಿದೆ. ಮುಖ್ಯವಾಗಿ ನಮ್ಮಲ್ಲಿ ನೀರಿನ ಪೋಲು ವಿಪರೀತವಾಗಿದೆ. ಇದನ್ನು ತಡೆಗಟ್ಟಲು ಮಲ್ಲೇಶ್ವರ ಕ್ಷೇತ್ರದಲ್ಲಿ 70 ವರ್ಷಗಳಷ್ಟು ಹಳೆಯ ಕೊಳವೆಗಳನ್ನು ತೆಗೆದುಹಾಕಿ, ಹೊಸ ಕೊಳವೆಗಳನ್ನು ಅಳವಡಿಸಲಾಗಿದೆ. ಕೇವಲ ಸಿ.ಎನ್.ಆರ್.ರಾವ್ ವೃತ್ತದಿಂದ ಯಶವಂತಪುರದ ವೃತ್ತದ ನಡುವೆ ಆಗುತ್ತಿದ್ದ 40 ಎಂಎಲ್‌ಡಿ ನೀರಿನ ಸೋರಿಕೆಯನ್ನು ನಿಲ್ಲಿಸಲಾಗಿದೆ ಎಂದು ಅವರು ಉದಾಹರಣೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಲಿ ಅಧ್ಯಕ್ಷ ಜಯರಾಂ, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
Key words: punith rajkumar-birthday- Minister- Ashwath Narayan- inaugurated – museum