ಬಸೆಲ್(ಸ್ವಿಜರ್ಲೆಂಡ್):ಆ-26: ಭಾರತದ ಅಗ್ರಮಾನ್ಯ ಷಟ್ಲರ್ ಪಿವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಸ್ವರ್ಣ ಪದಕ ಜಯಿಸುವ ಮೂಲಕ ಇತಿಹಾಸ ನಿರ್ವಿುಸಿದ್ದಾರೆ. ಸತತ ಎರಡೂ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಸಿಂಧು ಮೂರನೇ ಯತ್ನದಲ್ಲಿ ಚಾಂಪಿಯನ್ಪಟ್ಟ ಅಲಂಕರಿಸಲು ಯಶಸ್ವಿಯಾದರು. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 5ನೇ ಶ್ರೇಯಾಂಕಿತ ಸಿಂಧು 21-7, 21-7 ನೇರ ಗೇಮ್ಳಿಂದ ಜಪಾನ್ನ ನಜೋಮಿ ಒಕುಹರಾ ಎದುರು ಕೇವಲ 38 ನಿಮಿಷಗಳಲ್ಲಿ ಈ ಸಾಧನೆ ಮೆರೆದರು. ಪದಕ ಪ್ರದಾನ ಸಮಾರಂಭದಲ್ಲಿ ಸ್ವರ್ಣಕ್ಕೆ ಕೊರಳೊಡ್ಡಿದ ಬಳಿಕ ರಾಷ್ಟ್ರಧ್ವಜ ಮೇಲೇರುವ ವೇಳೆ ಸಿಂಧು ಆನಂದಭಾಷ್ಪ ಸುರಿಸಿದರು.
ರ್ಯಾಲಿ ಶಾಟ್ಗಳಿಗೆ ಹೆಸರಾಗಿರುವ ಜಪಾನ್ ಆಟಗಾರ್ತಿಯಿಂದ ಪ್ರಬಲ ಪೈಪೋಟಿ ನಿರೀಕ್ಷಿಸಿದರೂ ಸಿಂಧು ಆಟದ ಮುಂದೆ ನಡೆಯಲಿಲ್ಲ. 24 ವರ್ಷದ ಹೈದರಾಬಾದ್ ಆಟಗಾರ್ತಿ ಆಕ್ರಮಣಕಾರಿ ನಿರ್ವಹಣೆ ಎದುರು 3ನೇ ಶ್ರೇಯಾಂಕಿತ ಆಟಗಾರ್ತಿ ಒಕುಹರಾ ಕನಿಷ್ಠ ಪೈಪೋಟಿ ನೀಡಲು ವಿಫಲರಾದರು. ಜಪಾನ್ ಆಟಗಾರ್ತಿಗೆ ಮೊದಲ ಪಾಯಿಂಟ್ ಬಿಟ್ಟುಕೊಟ್ಟ ಸಿಂಧು, ಆಕರ್ಷಕ ಡ್ರಾಪ್ ಶಾಟ್ಗಳೊಂದಿಗೆ ಸತತ 8 ಅಂಕ ಗಳಿಸಿದರು. ಇದರೊಂದಿಗೆ 8-1 ರಿಂದ ಮುನ್ನಡೆ ಕಾಯ್ದುಕೊಂಡ ಸಿಂಧು ಬ್ರೇಕ್ ಅವಧಿಗೆ 11-2 ರಿಂದ ಮುನ್ನಡೆಯಲಿದ್ದರು. ಬ್ರೇಕ್ ಬಳಿಕವೂ ಅಂಕಗಳ ಅಂತರ ಹೆಚ್ಚಿಸಿಕೊಂಡ ಸಿಂಧು ಸತತ 5 ಪಾಯಿಂಟ್ಸ್ ಕಲೆಹಾಕಿ 16-3 ರಿಂದ ಮುನ್ನಡೆದರು. ಕೇವಲ 16 ನಿಮಿಷಗಳಲ್ಲಿ ಸಿಂಧು ಮೊದಲ ಗೇಮ್ ಜಯಿಸಿದ್ದರು.
ಎರಡನೇ ಗೇಮ್ಲ್ಲಿ 2017ರ ಚಾಂಪಿಯನ್ ಒಕುಹರಾ ಅವರಿಂದ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿತ್ತು. ಆರಂಭದಲ್ಲೇ 2-0 ಮುನ್ನಡೆ ಗಳಿಸಿದ ಸಿಂಧು, ಈ ವೇಳೆ ಜಪಾನ್ ಆಟಗಾರ್ತಿ 2 ಅಂಕ ಬಿಟ್ಟುಕೊಟ್ಟರು. ಇದರಿಂದ 3-2 ರಿಂದ ಮುನ್ನಡೆಯಲ್ಲಿದ್ದ ಸಿಂಧು ಆಕರ್ಷಕ ಸ್ಮ್ಯಾಷ್ ಹಾಗೂ ಬ್ಯಾಕ್ಹ್ಯಾಂಡ್ ಹೊಡೆತಗಳ ಮೂಲಕ ಸತತ 6 ಅಂಕ ಗಳಿಸಿ, 9-3 ರಿಂದ ಮುನ್ನಡೆ ಸಾಧಿಸಿದರು. ಎರಡನೇ ಗೇಮ್ ಬ್ರೇಕ್ ಅವಧಿಗೆ 11-4 ರಿಂದ ಮುನ್ನಡೆ ಹಿಗ್ಗಿಸಿಕೊಂಡ ಸಿಂಧು, ಬಳಿಕ ಸತತ 5 ಅಂಕಗಳಿಸಿ ಗೆಲುವಿತ್ತ ದಾಪುಗಾಲಿಟ್ಟರು. ಗೇಮ್ುದ್ದಕ್ಕೂ ಪ್ರಭುತ್ವ ಸಾಧಿಸಿದ ಸಿಂಧು 17-5 ರಿಂದ ಮುನ್ನಡೆ ಸಾಧಿಸಿದರು. ಮೊದಲ ಗೇಮ್ ಮಾದರಿಯಲ್ಲೇ ಎರಡನೇ ಗೇಮ್ಲ್ಲೂ 21-7 ರಿಂದ ಜಯದ ನಗೆ ಬೀರಿದರು. ಎಂಟರಘಟ್ಟದಲ್ಲಿ ಮಾಜಿ ವಿಶ್ವ ನಂ.1 ಚೀನಾ ತೈಪೆಯ ತೈ ಜು ಯಿಂಗ್ ವಿರುದ್ಧ ಸೆಮೀಸ್ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಚೆನ್ ಯೂ ಫೀ ಅವರನ್ನು ಮಣಿಸಿ ಪ್ರಶಸ್ತಿ ಹಂತಕ್ಕೇರಿದ್ದರು. ಘಟಾನುಘಟಿಗಳ ಸವಾಲು ಹಿಮ್ಮೆಟ್ಟಿಸಿದ್ದ ಸಿಂಧುಗೆ ತನಗಿಂತ ಉತ್ತಮ ಶ್ರೇಯಾಂಕ ಹೊಂದಿದ್ದ ಜಪಾನ್ನ ಒಕುಹರಾ ಯಾವುದೇ ಹಂತದಲ್ಲೂ ಸಾಟಿಯಾಗಲಿಲ್ಲ.-ಏಜೆನ್ಸೀಸ್
ನೀಗಿದ ಪ್ರಶಸ್ತಿ ಬರ
ಹಾಲಿ ವರ್ಷ ಪ್ರಶಸ್ತಿ ಜಯಿಸಲು ವಿಫಲರಾಗಿದ್ದ ಸಿಂಧು ಇದೀಗ ಬಹುದೊಡ್ಡ ಟೂರ್ನಿಯಲ್ಲಿ ಸ್ವರ್ಣ ಸಂಪಾದನೆಯೊಂದಿಗೆ ಗಮನಸೆಳೆದಿದ್ದಾರೆ. ಇಂಡೋನೇಷ್ಯಾ ಓಪನ್ನಲ್ಲಿ ಫೈನಲ್ಗೇರಿದ್ದರೂ ಜಪಾನ್ ಆಟಗಾರ್ತಿ ಅಕಾನೆ ಎಮಗುಚಿಗೆ ಸೋತಿದ್ದರು. ಬಳಿಕ ಜಪಾನ್ ಓಪನ್ ಸೆಮೀಸ್ನಲ್ಲೇ ಮುಗ್ಗರಿಸಿದ್ದ ಸಿಂಧು, ವಿಶ್ವ ಚಾಂಪಿಯನ್ಷಿಪ್ ಸಿದ್ಧತೆಗಾಗಿಯೇ ಥಾಯ್ಲೆಂಡ್ ಓಪನ್ನಿಂದ ಹೊರಗುಳಿದಿದ್ದರು. 2019ರಲ್ಲಿ ಸಿಂಧು ಜಯಿಸಿದ ಏಕೈಕ ಪ್ರಶಸ್ತಿ ಇದಾಗಿದೆ.
ಅಭಿನಂದನೆಗಳ ಮಹಾಪೂರ
ವಿಶ್ವ ಚಾಂಪಿಯನ್ಷಿಪ್ನಲ್ಲಿ ಸ್ವರ್ಣ ಜಯಿಸಿದ ಭಾರತದ ಮೊದಲ ಷಟ್ಲರ್ ಎನಿಸಿರುವ ಸಿಂಧು ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಸೈನಾ ನೆಹ್ವಾಲ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಸುರೇಶ್ ರೈನಾ, ನಟಿ ಹಾಗೂ ಸಿಂಧು ಗೆಳತಿ ತಾಪ್ಸಿ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.
5- ವಿಶ್ವ ಚಾಂಪಿಯನ್ಷಿಪ್ನಲ್ಲಿ ಪಿವಿ ಸಿಂಧುಗೆ 5ನೇ ಪದಕ ಇದಾಗಿದೆ.
10- ವಿಶ್ವ ಚಾಂಪಿಯನ್ಷಿಪ್ನಲ್ಲಿ ಭಾರತ ಗೆದ್ದಿರುವ 10 ಪದಕಗಳ ಪೈಕಿ 5 ಪದಕಗಳು ಸಿಂಧು ಮೂಲಕ ಬಂದಿವೆ. ಪ್ರಕಾಶ್ ಪಡುಕೋಣೆ ಈ ಸಾಧನೆ ಮಾಡಿದ ಮೊದಲ ಷಟ್ಲರ್. 1983ರಲ್ಲಿ ಪಡುಕೋಣೆ ಕಂಚಿನ ಪದಕ ಗೆದ್ದಿದ್ದರು. ಸೈನಾ ನೆಹ್ವಾಲ್ 2 ಪದಕ (2015ರಲ್ಲಿ ಬೆಳ್ಳಿ, 2017ರಲ್ಲಿ ಕಂಚು), ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಹಾಗೂ ಕನ್ನಡತಿ ಅಶ್ವಿನಿ ಪೊನ್ನಪ್ಪ ಜೋಡಿ ಕಂಚು (2011), ಸಿಂಗಲ್ಸ್ ವಿಭಾಗದಲ್ಲಿ ಸಾಯಿ ಪ್ರಣೀತ್ ಕಂಚು (2019) ಜಯಿಸಿದ್ದಾರೆ.
ರಾಜ್ಯದಿಂದ 5 ಲಕ್ಷ ರೂ. ಬಹುಮಾನ
ಪಿವಿ ಸಿಂಧು ಸಾಧನೆ ಬೆನ್ನಲ್ಲೇ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 5 ಲಕ್ಷ ರೂ. ಬಹುಮಾನ ಘೋಷಿಸಿದರು. ಜತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಅದರೊಂದಿಗೆ ಬಿಎಐ, ಸಿಂಧುಗೆ 20 ಲಕ್ಷ ರೂ. ಹಾಗೂ ಸಾಯಿ ಪ್ರಣೀತ್ಗೆ 5 ಲಕ್ಷ ರೂ. ಬಹುಮಾನ ಪ್ರಕಟಿಸಿದೆ.
5- ಪಿವಿ ಸಿಂಧು, ವಿಶ್ವ ಚಾಂಪಿಯನ್ಷಿಪ್ನಲ್ಲಿ ಅತಿಹೆಚ್ಚು ಪದಕ ಜಯಿಸಿದ ಷಟ್ಲರ್ಗಳ ಪೈಕಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಒಂದು ಸ್ವರ್ಣ ಹಾಗೂ ತಲಾ 2 ಬೆಳ್ಳಿ (2017, 2018), ಕಂಚು (2013, 2014) ಗೆದ್ದಿರುವ ಸಿಂಧು, ಮಾಜಿ ಒಲಿಂಪಿಕ್ ಚಾಂಪಿಯನ್ ಚೀನಾದ ಜಾಂಗ್ ನಿಂಗ್ ಜತೆಗೂಡಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಜಾಂಗ್ ನಿಂಗ್ 2001ರಿಂದ 2007ರವರೆಗೆ 1 ಸ್ವರ್ಣ, ತಲಾ 2 ಬೆಳ್ಳಿ ಹಾಗೂ ಕಂಚು ಗೆದ್ದಿದ್ದರು.
ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ 12 ಪದಕ ಗೆದ್ದ ಭಾರತ
ಭಾರತ ತಂಡ ವಿಶ್ವ ಪ್ಯಾರಾಬ್ಯಾಡ್ಮಿಂಟನ್ನಲ್ಲಿ 3 ಸ್ವರ್ಣ ಸೇರಿದಂತೆ 12 ಪದಕ ಜಯಿಸಿದೆ. ಪ್ರಮೋದ್ ಭಗತ್ ಸಿಂಗಲ್ಸ್ ಹಾಗೂ ಪುರುಷರ ಡಬಲ್ಸ್ ವಿಭಾಗದಲ್ಲಿ ಡಬಲ್ ಸ್ವರ್ಣ ಗೆದ್ದುಕೊಂಡರು. 2015ರ ಚಾಂಪಿಯನ್ಷಿಪ್ ಬಳಿಕ ಭಾರತದ ಶ್ರೇಷ್ಠ ಸಾಧನೆ ಇದಾಗಿದೆ. 2015ರಲ್ಲಿ ಭಾರತ 4 ಸ್ವರ್ಣ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಪ್ರಮೋದ್ ಭಗತ್ ಎಸ್ಎಲ್-3 ವಿಭಾಗದ ಸಿಂಗಲ್ಸ್ನಲ್ಲಿ 6-21, 21-14, 21-5 ಗೇಮ್ಳಿಂದ ಇಂಗ್ಲೆಂಡ್ನ ಬೆಟ್ಹೆಲ್ ವಿರುದ್ಧ ಗೆದ್ದರೆ, ಡಬಲ್ಸ್ ವಿಭಾಗದಲ್ಲಿ ಮನೋಜ್ ಸರ್ಕಾರ್ ಜತೆಗೂಡಿ ಸ್ವರ್ಣ ಸಾಧನೆ ಮಾಡಿದರು. ‘ಸಿಂಗಲ್ಸ್ ವಿಭಾಗದಲ್ಲಿ ಇದು ನನ್ನ ಶ್ರೇಷ್ಠ ಸಾಧನೆ. ಸ್ವರ್ಣ ಗೆದ್ದಿರುವುದು ಖುಷಿ ನೀಡಿದೆ’ ಎಂದು ಪ್ರಮೋದ್ ಭಗತ್ ಹೇಳಿದ್ದಾರೆ.
ಇಂದು (ಭಾನುವಾರ) ನನ್ನ ತಾಯಿಯ ಹುಟ್ಟುಹಬ್ಬ. ಅವರಿಗೆ ಈ ಸ್ವರ್ಣ ಪದಕ ಅರ್ಪಿಸುತ್ತೇನೆ. ಕಳೆದ ಎರಡು ಬಾರಿಯೂ ಪ್ರಶಸ್ತಿ ಹಂತದಲ್ಲಿ ಸೋತಿದ್ದೆ. ಈ ಗೆಲುವು ನನಗೆ ಮುಖ್ಯವಾಗಿತ್ತು. ನನಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ. ಓರ್ವ ಭಾರತೀಯಳಾಗಿ ಪ್ರಶಸ್ತಿ ಜಯಿಸಿರುವುದು ಖುಷಿ ನೀಡಿದೆ. ನನ್ನ ಕೋಚ್ಗಳಾದ ಗೋಪಿ ಸರ್, ಕಿಮ್ ಹಾಗೂ ಸಹಾಯಕ ಸಿಬ್ಬಂದಿ ವರ್ಗದ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ.
| ಪಿವಿ ಸಿಂಧು ವಿಶ್ವ ಚಾಂಪಿಯನ್
ಅಗಾಧವಾದ ಪ್ರತಿಭೆ ನೀವು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಸ್ವರ್ಣ ಜಯಿಸುವ ಮೂಲಕ ಭಾರತದ ಕೀರ್ತಿಪತಾಕೆಯನ್ನು ಎತ್ತಿಹಿಡಿದ ಪಿವಿ ಸಿಂಧುಗೆ ಅಭಿನಂದನೆಗಳು. ಕ್ರೀಡೆ ಮೇಲಿರುವ ನಿಮ್ಮ ಪ್ರೀತಿ ಹಾಗೂ ಅರ್ಪಣಾ ಮನೋಭಾವವೇ ಎಲ್ಲರಿಗೂ ಮಾದರಿಯಾಗಲಿದೆ. ಯುವ ಜನತೆಗೆ ಸ್ಪೂರ್ತಿಯಾಗಿ ಹೊರಹೊಮ್ಮಿದ್ದೀರಿ.
ನರೇಂದ್ರ ಮೋದಿ ಪ್ರಧಾನ ಮಂತ್ರಿ.
ಸೇಡು ತೀರಿಸಿಕೊಂಡ ಪಿವಿಎಸ್
ಎರಡು ವರ್ಷಗಳ ಹಿಂದೆ ಚೀನಾ ದಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನ ಫೈನಲ್ನಲ್ಲಿ 110 ನಿಮಿಷ ಕಾದಾಡಿದರೂ ಒಕುಹರಾ ಎದುರು ಸಿಂಧು ಸೋಲುವ ಮೂಲಕ ಅಂದೇ ಇತಿಹಾಸ ನಿರ್ವಿುಸುವ ಅವಕಾಶ ತಪ್ಪಿಸಿ ಕೊಂಡಿದ್ದರು. ಈಗ 38 ನಿಮಿಷಗಳಲ್ಲಿ ಜಪಾನ್ ಆಟಗಾರ್ತಿಯನ್ನು ಮಣಿಸಿ ಸೇಡು ತೀರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ವಿುಸಿದರು. 2016 ಒಲಿಂಪಿಕ್ಸ್ ಸೆಮಿಫೈನಲ್ನಲ್ಲೂ ಒಕುಹರಾರನ್ನು ಸೋಲಿಸಿದ್ದರು.
ಕೃಪೆ:ವಿಜಯವಾಣಿ