ಬೆಂಗಳೂರು, ಜುಲೈ 17, 2022 (www.justkannada.in): ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಪಿ.ವಿ. ಸಿಂಧು ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಚೀನಾದ ವಾಂಗ್ ಝಿ ಯಿ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ತಾರೆ ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆರಂಭದಿಂದಲೇ ವಾಂಗ್ ವಿರುದ್ದ ಮೇಲುಗೈ ಸಾಧಿಸಿದ್ದ ಸಿಂಧು, ಮೊದಲ ಸೆಟ್ ಅನ್ನು 21-9 ಅಂತರದಿಂದ ಗೆದ್ದುಕೊಂಡರು.
2ನೇ ಸೆಟ್ನಲ್ಲಿ ವಾಂಗ್ ಝಿ ಯಿ ಕಂಬ್ಯಾಕ್ ಮಾಡಿದ್ದರು. ದ್ವಿತೀಯ ಸೆಟ್ನ ಆರಂಭದಲ್ಲೇ ಅತ್ಯುತ್ತಮ ಸ್ಮ್ಯಾಶ್ ಮೂಲಕ 6 ಪಾಯಿಂಟ್ ಕಲೆಹಾಕಿ ಒತ್ತಡಕ್ಕೆ ಸಿಲುಕಿಸಿದ್ದರು. ಪರಿಣಾಮ ಎರಡನೇ ಸೆಟ್ ಅನ್ನು ಪಿವಿ ಸಿಂಧು 11-21 ಅಂತರದಿಂದ ಸೋತರು.
ಮೊದಲೆರಡು ಸೆಟ್ಗಳಲ್ಲಿ ಇಬ್ಬರಿಂದಲೂ ಭರ್ಜರಿ ಪ್ರದರ್ಶನ ಮೂಡಿಬಂದಿದ್ದ ಕಾರಣ ಅಂತಿಮ ಸೆಟ್ನಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಲಾಗಿತ್ತು. ಅಂತಿಮವಾಗಿ 21-15 ರ ಅಂತರದಿಂದ ಗೆಲ್ಲುವ ಮೂಲಕ ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು.