ತುಮಕೂರು, ಜನವರಿ 22 ,2025 (www.justkannada.in): ಕೃಷಿ ವ್ಯವಸ್ಥೆಯನ್ನು ನಾವೇ ಹಾಳು ಮಾಡಿದ್ದು, ಈಗ ಮತ್ತೆ ಹಿಂದಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದೇವೆ. ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಹಾಳಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದರು.
ಶಿರಾದಲ್ಲಿ ಸ್ಪಟಿಕಪುರಿ ಮಹಾಸಂಸ್ಥಾನದ ಸಹಯೋಗದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಆರ್.ಅಶೋಕ್ ಅವರು ಮಾತನಾಡಿದರು,
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು ಸತ್ತುಹೋಗಿವೆ. ಮಣ್ಣಿನ ಫಲವತ್ತತೆ ನಾಶವಾಗಿದೆ. ಇದು ನೈಸರ್ಗಿಕ ಕೃಷಿಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಚೀನಾದಲ್ಲಿ ಮಣ್ಣಿನ ಫಲವತ್ತತೆಗಾಗಿ ಈಗ ಏಡಿಗಳನ್ನು ಬಳಸಲಾಗುತ್ತಿದೆ. ಮೊದಲಿಗೆ ರಾಸಾಯನಿಕ ಗೊಬ್ಬರವನ್ನು ಚೆನ್ನಾಗಿ ಬಳಸಿ, ಈಗ ರಾಸಾಯನಿಕ ಗೊಬ್ಬರ ಬಳಸುವುದು ಬೇಡ ಎಂದು ಜಾಗೃತಿ ತರಲಾಗುತ್ತಿದೆ. ಈಗ ಎಲ್ಲರೂ ಮತ್ತೆ ಹಿಂದಕ್ಕೆ ಹೋಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಹಾಗೆಯೇ ನೀರಿನ ಕೊರತೆಯೂ ಕಂಡುಬರುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ನೀರಿನ ಕೊರತೆ ಇದೆ. ಆದರೆ ಇಲ್ಲೂ ಮಂಡ್ಯ ಜಿಲ್ಲೆಯಲ್ಲಿ ಮಾಡುವಂತೆ ಕಬ್ಬು ಬೆಳೆಯಲಾಗುತ್ತಿದೆ. ಆದ್ದರಿಂದ ಕೃಷಿ ತಜ್ಞರು, ವಿಜ್ಞಾನಿಗಳು ಹಾಗೂ ಸರ್ಕಾರ ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಹಿಂದೆ ಯಾವುದೇ ನೀರು ಕುಡಿದರೂ ಆರೋಗ್ಯ ಕೆಡುತ್ತಿರಲಿಲ್ಲ. ಈಗ ನೀರಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅನಾರೋಗ್ಯ ಉಂಟಾಗುತ್ತದೆ. ಮಾಲಿನ್ಯದಿಂದಾಗಿ ನೀರು ಹೆಚ್ಚು ಕಲುಷಿತವಾಗಿದೆ. ಹಾಗೆಯೇ ಕೃಷಿ ವ್ಯವಸ್ಥೆ ಕೂಡ ಹಾಳಾಗಿದೆ. ನಾನು ಸಣ್ಣವನಾಗಿದ್ದಾಗ ಜೋಳದ ಹೊಲವನ್ನು ನೋಡಿಕೊಂಡು ನಂತರ ಶಾಲೆಗೆ ಹೋಗುತ್ತಿದ್ದೆ. ಬಹುತೇಕ ಕುಟುಂಬಗಳು ಕೃಷಿಯನ್ನು ಅವಲಂಬಿಸಿದ್ದವು. ಈ ವ್ಯವಸ್ಥೆಯಿಂದ ಹೊರಗೆ ಬಂದಿರುವುದರಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಕೃಷಿ ಕುರಿತಾದ ಜ್ಞಾನ ರೈತ ಕುಟುಂಬಗಳಲ್ಲಿ ಸಹಜವಾಗಿ ಬೆಳೆದುಬಂದಿದೆ. ಹಿಂದಿನ ಕಾಲದಲ್ಲಿ ಯಾವ ರೈತರೂ ಪುಸ್ತಕ ಓದಿ ಕೃಷಿ ಮಾಡುತ್ತಿರಲಿಲ್ಲ ಎಂದರು.
ಸ್ಪಟಿಕಪುರಿ ಮಹಾಸಂಸ್ಥಾನ ಮಠವು ಕೃಷಿ ಅಭಿವೃದ್ಧಿಗೆ ಹಲವಾರು ಕೊಡುಗೆ ನೀಡುತ್ತಿದೆ. ಮಠದ ಪೀಠಾಧ್ಯಕ್ಷರಾಗಿರುವ ಪೂಜ್ಯ ನಂಜಾವಧೂತ ಸ್ವಾಮೀಜಿಯವರು ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಎಂದು ಶ್ಲಾಘಿಸಿದರು.
Key words: ruin, agricultural system, backwards, R. Ashok