ಬೆಂಗಳೂರು,ಏಪ್ರಿಲ್,1,2025 (www.justkannada.in): ಬಜೆಟ್ ಅಧಿವೇಶನದ ವೇಳೆ 18 ಬಿಜೆಪಿ ಶಾಸಕರನ್ನ ಅಮಾನತು ಮಾಡಿ ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯುವಂತೆ ಕೋರಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ವಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಧಾನಸಭೆ ಅಧೀವೇಶನದಲ್ಲಿ ಹನಿಟ್ರ್ಯಾಪ್ ಹಾಗೂ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಕುರಿತು ಚರ್ಚೆ ವೇಳೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆಂದು ಆರೋಪಿಸಿ ಸ್ಪೀಕರ್ ಯು.ಟಿ ಖಾದರ್ ಅವರು ಬಿಜೆಪಿಯ 18 ಶಾಸಕರನ್ನ 6 ತಿಂಗಳ ಕಾಲ ಸದನದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಈ ಸಂಬಂಧ ಇದೀಗ ಸ್ಪೀಕರ್ ಯುಟಿ ಖಾದರ್ ಅವರಿಗೆ ಪತ್ರ ಬರೆದಿರುವ ಆರ್.ಅಶೋಕ್, ವಿಧಾನಸಭೆ ಅಧಿವೇಶನದ ವೇಳೆ ಸದನದಲ್ಲಿ ಚರ್ಚೆಯು ವಿಕೋಪಕ್ಕೆ ತಿರುಗಿದಾಗ ಪ್ರತಿಪಕ್ಷದವರಾದ ನಾವೆಲ್ಲ ಸಭಾಧ್ಯಕ್ಷರ ಪೀಠದ ಸುತ್ತ ನಿಂತು ಪ್ರತಿಭಟನೆ ಮಾಡಿದ್ದೇವೆ. ಈ ಸಂದರ್ಭದಲ್ಲಿ ತಾವು, ಸದನದಲ್ಲಿ ಪೀಠದ ಆದೇಶವನ್ನೂ ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡಿರುತ್ತೀರೆಂದು, ಆಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿರುತ್ತೀರೆಂದು ವಿಧಾನಸಭೆಯ 18 ಸದಸ್ಯರನ್ನು ಅಮಾನತುಗೊಳಿಸಿದ್ದೀರಿ.
ರಾಜ್ಯದ ವಿಧಾನಮಂಡಲದ ಉಭಯ ಸದನಗಳು ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಳಗಳು, ‘ಪ್ರಜಾಪ್ರಭುತ್ವದ ದೇಗುಲಗಳು’ ಎಂದು ಕರೆದರೆ ತಪ್ಪೇನೂ ಇಲ್ಲ. ಈ ದೇಗುಲಗಳಲ್ಲಿನ ಸಭಾಧ್ಯಕ್ಷರು ಮತ್ತು ಮಾನ್ಯ ಸಭಾಪತಿಗಳಿಗೆ ಇರುವ ಸ್ಥಾನವೂ ಅಷ್ಟೇ ಗೌರವಾನ್ವಿತವಾದುದು. ಈ ವಿಚಾರದಲ್ಲಿ ನನಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಮಾರ್ಚ್ 21ರಂದು ನಡೆದ ಘಟನೆ ಉದ್ದೇಶಪೂರ್ವಕವಾದುದಲ್ಲ. ಅಥವಾ ನಿಮ್ಮ ಪೀಠಕ್ಕೆ ಅಗೌರವ ತರುವ ಉದ್ದೇಶವೂ ಯಾವ ಶಾಸಕರಿಗೂ ಇರಲಿಲ್ಲ. ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ಹೀಗಾಗಿ 18 ಬಿಜೆಪಿ ಶಾಸಕರ ಅಮಾನತು ಆದೇಶವನ್ನ ವಾಪಸ್ ಪಡೆಯಿರಿ ಎಂದು ಆರ್.ಅಶೋಕ್ ಮನವಿ ಮಾಡಿದ್ದಾರೆ.
Key words: withdrawal, BJP MLAs, suspension, R. Ashok, letter, Speaker