ಶಾಸಕರ ಅಮಾನತು ಆದೇಶ ವಾಪಸ್ ಪಡೆಯಿರಿ, ಇಲ್ಲವಾದರೆ ತೀವ್ರ ಹೋರಾಟ: ಆರ್.ಅಶೋಕ ಆಗ್ರಹ

ಬೆಂಗಳೂರು, ಏಪ್ರಿಲ್, 2,2025 (www.justkannada.in):  18 ಶಾಸಕರ ಅಮಾನತು ಆದೇಶ ವಾಪಸ್ ಪಡೆಯದೇ ಹೋದಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.

18 ಶಾಸಕರ ಅಮಾನತು ಆದೇಶ ವಾಪಸ್ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ನಂತರ ವಿಧಾನಸೌಧದಲ್ಲಿ ಮಾತನಾಡಿದ ಆರ್.ಅಶೋಕ್ ಅವರು, ಮುಸ್ಲಿಮರಿಗೆ ನೀಡಿದ ಮೀಸಲಾತಿಯನ್ನು ವಿರೋಧಿಸಿ ಹಾಗೂ ಹನಿಟ್ರ್ಯಾಪ್ ಪ್ರಕರಣ ಖಂಡಿಸಿ 18 ಶಾಸಕರು ಪ್ರತಿಭಟನೆ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಸಿಬಿಐ, ಎಸ್ಐಟಿ ಅಥವಾ ಯಾವುದೇ ತನಿಖೆ ಮಾಡುವುದಾಗಿ ಹೇಳಿದ್ದರೆ ಅಥವಾ ಸ್ಪಷ್ಟತೆ ನೀಡಿದ್ದರೆ ಪ್ರತಿಭಟನೆ ಕೈ ಬಿಡಬಹುದಿತ್ತು. ಅಮಾನತು ಸಮಯದಲ್ಲಿ ಸ್ಪೀಕರ್ ಯು.ಟಿ.ಖಾದರ್ ಸೌಜನ್ಯಕ್ಕೂ ಶಾಸಕರನ್ನು ಕರೆದು ಮಾತಾಡಿಲ್ಲ ಎಂದು ದೂರಿದರು.

ಸ್ಪೀಕರ್ ಕಾಂಗ್ರೆಸ್ ಸರ್ಕಾರದ ಪರವಾಗಿ ನಿಂತಿದ್ದಾರೆ. ಈಗ ಸಚಿವ ಸಂಪುಟ ಪುನರ್ ರಚನೆಯಾಗಲು ಸಿದ್ಧತೆ ನಡೆದಿದೆ. ಇಂತಹ ಸಮಯದಲ್ಲಿ ವಿರೋಧ ಪಕ್ಷದ ಸದಸ್ಯರ ವಿರುದ್ಧ ಕ್ರಮ ಕೈಗೊಂಡರೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಸ್ಪೀಕರ್ ಯು.ಟಿ.ಖಾದರ್ ಅವರಿಗಿದೆ. ಸಭಾಧ್ಯಕ್ಷರ ಪೀಠ ಬಹಳ ಪವಿತ್ರವಾದುದು. ಸ್ಪೀಕರ್ ಯಾರು ಯಾರನ್ನೋ ಕರೆದುಕೊಂಡು ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ಆದರೆ ಶಾಸಕರು ಪೀಠದ ಬಳಿ ಬಂದು ಪ್ರತಿಭಟನೆ ಮಾಡಿದರೆ ಅವರನ್ನು ಅಮಾನತು ಮಾಡಲಾಗುತ್ತದೆ. ಸ್ಪೀಕರ್ ಕೂಡಲೇ ಅಮಾನತು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

Key words: Revoke, suspension, order, MLAs, R. Ashoka, demands