ಕಾಂಗ್ರೆಸ್ ಗೆ ಮತ ನೀಡಿದ ಜನರು ಪಾಪ ತೊಳೆದುಕೊಳ್ಳುವುದು ಹೇಗೆಂದು ಚಿಂತಿಸುತ್ತಿದ್ದಾರೆ-ಆರ್.ಅಶೋಕ್

ಬೆಂಗಳೂರು, ಏಪ್ರಿಲ್, 3,2025 (www.justkannada.in): ಕಾಂಗ್ರೆಸ್ ಗೆ ಮತ ನೀಡಿದ ಜನರು ಪಾಪ ತೊಳೆದುಕೊಳ್ಳುವುದು ಹೇಗೆಂದು ಚಿಂತೆ ಮಾಡುತ್ತಿದ್ದಾರೆ. ಸರ್ಕಾರದ ಬೆಲೆ ಏರಿಕೆಯ ನೀತಿ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ  ಆರ್.ಅಶೋಕ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಿಗೆ ಮೂಲಕ ಕಳ್ಳತನ ಮಾಡಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಕಮಿಷನ್ ಮೂಲಕ ಕಳ್ಳತನ ಮಾಡುತ್ತಿದ್ದಾರೆ. ಸತ್ತಾಗ ಹೆಣದ ಮೇಲೆ ಹಣ ಹಾಕುವ ಪದ್ಧತಿ ಇದೆ. ಕಾಂಗ್ರೆಸ್ ಸರ್ಕಾರ ಮರಣ ಪ್ರಮಾಣ ಪತ್ರಕ್ಕೂ ಶುಲ್ಕ ಏರಿಸಿ ಹಣ ಸಂಗ್ರಹ ಮಾಡುತ್ತಿದೆ. ಮದ್ಯದ ದರವನ್ನೂ ಏರಿಸಿ ಮದ್ಯಪ್ರಿಯರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಶೌಚಾಲಯ ನಿರ್ವಹಣೆ ಮಾಡಲು ಕೂಡ ಸರ್ಕಾರದ ಬಳಿ ದುಡ್ಡಿಲ್ಲ. ಬೆಂಗಳೂರಿನ ಜನರಿಗೆ ಮುಂದೆ ನೀರಿನ ಶುಲ್ಕ ಏರಿಕೆಯ ಶಾಕ್ ಕೂಡ ಕಾದಿದೆ ಎಂದರು.

ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಸರ್ಕಾರ, ಪತ್ನಿಗೆ ಸಹಾಯಧನ ನೀಡಿ, ಪತಿಯಿಂದ ಹಣ ವಸೂಲಿ ಮಾಡಲಾಗುತ್ತಿದೆ. ಕಾಂಗ್ರೆಸ್ ಗೆ ಮತ ನೀಡಿದ ಜನರು ಪಾಪ ತೊಳೆದುಕೊಳ್ಳುವುದು ಹೇಗೆಂದು ಚಿಂತೆ ಮಾಡುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದ್ದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದರು.

ಆಯವ್ಯಯದಲ್ಲಿ ಜನರ ಮೇಲೆ ಹಾಕುವ ತೆರಿಗೆಗಳ ಬಗ್ಗೆ ಸರಿಯಾಗಿ ತಿಳಿಸಬೇಕಿತ್ತು. ಆದರೆ ಬಜೆಟ್ ಮುಗಿದ ನಂತರ ತೆರಿಗೆಗಳನ್ನು ಏರಿಸಲಾಗಿದೆ. ವಕ್ಪ್ ಮಂಡಳಿ ರೈತರ ಜಮೀನುಗಳನ್ನು ಕಬಳಿಸುತ್ತಿತ್ತು. ಅದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ಕಾಯ್ದೆ ತಿದ್ದುಪಡಿ ತಂದಿದ್ದಾರೆ. ಆದರೆ ಇದನ್ನು ಕೂಡ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದರು.

ಬಿಜೆಪಿ ನಾಯಕರು ಪ್ರತಿಭಟಿಸಿದಾಗ ಬಸ್ ಗಳನ್ನು ತಂದು ಅದರಲ್ಲಿ ಬಂಧಿಸಿ ಇರಿಸಲಾಗುತ್ತದೆ. ಆದರೆ ಈಗ ಬಸ್ ಗಳಿಗೆ ಕೊರತೆ ಇದೆ. ಬಸ್ ತರುವ ಯೋಗ್ಯತೆಯೂ ಸರ್ಕಾರಕ್ಕೆ ಇಲ್ಲ ಎಂದರು.

Key words:  Protest, against, Congress government, R.Ashok