ಬೆಂಗಳೂರು,ಏಪ್ರಿಲ್,23,2025 (www.justkannada.in): ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಉಗ್ರರ ದಾಳಿ ಕುರಿತು ಮಾತನಾಡಿದ ಆರ್.ಅಶೋಕ್, ಇದು ನಮಗೆಲ್ಲರಿಗೂ ದುಃಖದ ದಿನ. ಈ ಘಟನೆಯಲ್ಲಿ 28 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಡೀ ದೇಶ ಸಂತ್ರಸ್ತರ ಕುಟುಂಬದ ಜೊತೆಗೆ ಇದೆ. ಬೆಂಗಳೂರಿನ ಭರತ್ ಭೂಷಣ್, ಶಿವಮೊಗ್ಗದ ಮಂಜುನಾಥ್ ಈ ಘಟನೆಯಲ್ಲಿ ಮೃತರಾಗಿರುವುದು ದುಃಖಕರ. ವಿಷಯ ತಿಳಿದ ಕೂಡಲೇ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕರೆ ಮಾಡಿ ಕನ್ನಡಿಗರ ಸುರಕ್ಷತೆ ಬಗ್ಗೆ ವಿಚಾರಿಸಿದ್ದೇನೆ. ಉಳಿದ ಕನ್ನಡಿಗರ ಜೊತೆ ಸಂಪರ್ಕವೇರ್ಪಡಿಸಿ ಸಹಾಯ ನೀಡುವ ಬಗ್ಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.
ಜಮ್ಮು-ಕಾಶ್ಮೀರ ಎಂದರೆ ಪ್ರವಾಸೋದ್ಯಮದ ಕೇಂದ್ರ. ಇಲ್ಲಿ ಕೇಂದ್ರ ಸರ್ಕಾರದ ಕ್ರಮಗಳಿಂದ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ, ಅಭಿವೃದ್ಧಿಗೆ ದಾರಿ ಮಾಡಿದ್ದರು ಎಂದರು.
ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಿದೆ. ಜಾಮೀನು ಪಡೆದು ಹೊರಗೆ ಬಂದ ಭಯೋತ್ಪಾದಕರ ಮೇಲೆ ನಿಗಾ ವಹಿಸಬೇಕು. ಅಂಥವರನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆಯಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.
Key words: Pahalgam, terror, attack, R. Ashok