ಹಸುಗಳ ಕೆಚ್ಚಲು ಕೊಯ್ದ ಘಟನೆ ಹಿಂದೆ ಇರುವವರನ್ನು ಪತ್ತೆ ಹಚ್ಚಲು ಆರ್‌.ಅಶೋಕ್ ಆಗ್ರಹ

ಬೆಂಗಳೂರು, ಜನವರಿ 13,2025 (www.justkannada.in): ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ರಾಜ್ಯ ಸರ್ಕಾರ ಪತ್ತೆ ಮಾಡಬೇಕೇ ಹೊರತು ಒಬ್ಬ ವ್ಯಕ್ತಿಯನ್ನು ಕಾಟಾಚಾರಕ್ಕೆ ಬಂಧಿಸುವುದಲ್ಲ. ಪೊಲೀಸರು ಇದರ ಹಿಂದಿರುವವರನ್ನು ಹುಡುಕಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಆರ್.ಅಶೋಕ್, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಿಂದೂಗಳಿಗೆ ಘಾಸಿಯಾಗುವ ಘಟನೆ ನಡೆದಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲೇ ಹಸುಗಳ ಕೆಚ್ಚಲು ಕೊಯ್ದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಹಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದೆ. ಈಗ ಕಾಟಾಚಾರಕ್ಕಾಗಿ ಒಬ್ಬನನ್ನು ಬಂಧಿಸಿದ್ದು, ಈತ ಬಿಹಾರದಿಂದ ಬಂದವನು ಎನ್ನಲಾಗಿದೆ. ಆದರೆ ಈತ ಇದೇ ಊರಿನಲ್ಲಿ ಹತ್ತು ವರ್ಷಗಳಿಂದ ನೆಲೆಸಿದ್ದು, ಆತನ ಅಣ್ಣನಿಗೆ ಫ್ಯಾಕ್ಟರಿ ಕೂಡ ಇದೆ. ಪೊಲೀಸರು ಈತನನ್ನು ವಿಚಾರಣೆ ಮಾಡಿ, ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಮಾಡಬೇಕಿತ್ತು ಎಂದರು.

ಈ ಘಟನೆಯಲ್ಲಿ ಯಾರ ಕೈವಾಡವಿದೆ ಎಂದು ತನಿಖೆ ಮಾಡಬೇಕಿತ್ತು. ಇಲ್ಲಿ ಪಶು ಆಸ್ಪತ್ರೆಯ ಜಾಗವಿದ್ದು, ಅದನ್ನು ವಕ್ಫ್‌ ಗೆ ನೀಡಲು ಪ್ರಯತ್ನ ನಡೆದಿತ್ತು. ಸುಮಾರು 500 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಲೂಟಿ ಮಾಡಲು ನಕಲಿ ದಾಖಲೆಗಳನ್ನು ಸರ್ಕಾರ ಸೃಷ್ಟಿ ಮಾಡಿತ್ತು. ಅದರ ವಿರುದ್ಧ ಹೋರಾಟ ಮಾಡಿದ ಕರ್ಣ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ. ಸಚಿವ ಜಮೀರ್‌ ಅಹ್ಮದ್‌ ಹಸು ನೀಡುವುದರಿಂದ ಪರಿಹಾರ ಸಿಗಲ್ಲ. ಇದಕ್ಕೆ ನ್ಯಾಯ ಸಿಗಬೇಕಿದೆ ಎಂದು ಆಗ್ರಹಿಸಿದರು.

ಹಿಂದೂಗಳ ಸಂಖ್ಯೆ ಕಡಿಮೆಯಾಗಿಸುವ ಹುನ್ನಾರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಎರಡು ಮಕ್ಕಳು ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದನ್ನೇ ಮುಸ್ಲಿಮರ ಬಳಿ ಹೋಗಿ ಹೇಳಲಿ. ಹಿಂದೂಗಳ ಸಂಖ್ಯೆ ಕಡಿಮೆಯಾಗಲಿ, ಮುಸ್ಲಿಮರ ಸಂಖ್ಯೆ ಹೆಚ್ಚಲಿ ಎಂಬುದು ಅವರ ಉದ್ದೇಶ. ಒಂದು ಧರ್ಮಕ್ಕೆ ಬೆಣ್ಣೆ, ಮತ್ತೊಂದು ಧರ್ಮಕ್ಕೆ ಸುಣ್ಣ ಹಚ್ಚಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲ ಸಮುದಾಯಗಳನ್ನು ಒಂದಾಗಿ ಕೊಂಡೊಯ್ಯಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಆಡಳಿತ ನೆಲ ಕಚ್ಚಿದೆ. ಅಭಿವೃದ್ಧಿ ಕಾರ್ಯವನ್ನು ಟಾರ್ಚ್‌ ಹಾಕಿ ಹುಡುಕಬೇಕಿದೆ. ಸಿಎಂ ಕುರ್ಚಿ ಖಾಲಿ ಇಲ್ಲವೆಂದು ಸಿದ್ದರಾಮಯ್ಯ ಸಾವಿರ ಬಾರಿ ಹೇಳಿದ್ದಾರೆ. ಎಲ್ಲೇ ಹೋದರೂ ಅದನ್ನೇ ಮಾತಾಡುತ್ತಿದ್ದಾರೆ. ಎಲ್ಲ ನಾಯಕರು ಪವರ್‌ ಪಾಲಿಟಿಕ್ಸ್‌ ನಲ್ಲಿ ಮುಳುಗಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಮಂಡ್ಯಕ್ಕೆ ಹೋಗಿ ಅಧಿಕಾರ ಕೊಡಿ ಎಂದು ಜನರ ಮುಂದೆ ಹೇಳಿದ್ದರು. ಈಗ ಶಾಸಕರ ಮುಂದೆ ಹೋಗಿ ಅಂಗಲಾಚುತ್ತಿದ್ದಾರೆ. ಇವರ ಕಥೆ ಕತ್ತಲಲ್ಲಿ ಕರಡಿಯನ್ನು ಹುಡುಕುವಂತಾಗಿದೆ. ಈ ಪವರ್‌ ಶೇರಿಂಗ್‌ ಎಲ್ಲಿ ನಡೆದಿದೆ ಎಂದು ಜನರಿಗೆ ಸ್ಪಷ್ಟವಾಗಿ ತಿಳಿಸಲಿ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಶ್ಲೋಕ ಹೇಳಿದರೆ, ಸಚಿವ ರಾಜಣ್ಣ ಟೀಕೆ ಮಾಡುತ್ತಿದ್ದಾರೆ. ಸಚಿವ ಪರಮೇಶ್ವರ್‌ ಕೂಡ ಕೆಂಡಕಾರಿದ್ದಾರೆ. ಕೆಲವು ಶಾಸಕರು ಮುಂದಿನ ಸಿಎಂ ಶಿವಕುಮಾರ್‌ ಎನ್ನುತ್ತಿದ್ದಾರೆ. ಜನರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಇಂತಹ ಪಾಪಿ ಸರ್ಕಾರ ಯಾಕಾದರೂ ಬಂತೋ ಎಂದು ಜನರು ಶಾಪ ಹಾಕುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಬಂದು ಹೋದ ಬಳಿಕವೂ ಈ ಸಮಸ್ಯೆ ನಿವಾರಣೆಯಾಗಲ್ಲ. ಪವರ್‌‌ ಶೇರಿಂಗ್‌ ಬಗ್ಗೆ ಶಾಸಕರಿಗೆ ಸ್ಪಷ್ಟವಾಗಬೇಕಿದೆ. ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರಿಗೆ ಮಾತು ನೀಡಿದೆ. ಅದರ ಬಗ್ಗೆ ಸರಿಯಾಗಿ ತಿಳಿಸಲಿ ಎಂದರು.

Key words: R. Ashok, incident, cutting, udders of cows