ಬೆಂಗಳೂರು,ನ,13,2019(www.justkannada.in): ಬಹಳ ದಿನಗಳ ನಂತರ ನಟಿ ರಾಧಿಕಾ ಮತ್ತೆ ಬಣ್ಣ ಹಚ್ಚಿದ್ದು ಭಿನ್ನ ಅವತಾರದಲ್ಲಿ ಕಾಣಿಸಿದ್ದಾರೆ.
ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಣ್ಣ ಹಚ್ಚಿರುವ ಚಿತ್ರ ದಮಯಂತಿ ಟ್ರೈಲರ್ ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ಮಂಗಳವಾರ, ನ.12 ರ ಸಂಜೆ 6 ಗಂಟೆಗೆ ಬಿಡುಗಡೆಯಾಗಿದೆ. ದಶಕದ ಹಿಂದೆ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದ ರಾಧಿಕಾ ಈಗ ದಮಯಂತಿ ಮೂಲಕ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟ್ರೈಲರ್ ನಲ್ಲಿ ಏನಿದೆ?
ಚಿತ್ರದ ಟ್ರೈಲರ್ ನಲ್ಲಿ ರಾಧಿಕಾ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಶತಮಾನದ ಹಿಂದಿನ ಮಹಾರಾಣಿಯಾಗಿಯೂ ಅಬ್ಬರಿಸಿದ್ದಾರೆ. ರಾಜನ ಮಗಳಾದ ರಾಧಿಕಾ ಆತನ ನಿಧನದ ನಂತರ ಹೇಗೆ ರಾಜ್ಯಭಾರ ಮಾಡುತ್ತಾಳೆ ಎಂಬ ಕಥಾನಕ ಒಳಗೊಂಡಿದೆ. ಟ್ರೈಲರ್ ನಲ್ಲಿ ರಾಧಿಕಾ ಪ್ರಾರಂಭದಲ್ಲಿ ಮಹಾರಾಣಿಯಾಗಿ ಕಾರಿನಿಂದ ಇಳಿಯುತ್ತಾಳೆ. ನಂತರದ ದೃಶ್ಯಗಳಲ್ಲಿ ಫ್ಯಾಂಟಸಿಯ ಅಂಶಗಳಿವೆ. ಮಹಾರಾಣಿ ನಿಧನದ ನಂತರ ಆಕೆ ಆತ್ಮವಾಗುತ್ತಾಳೆ. ಆತ್ಮವಾಗಿ ರಾಧಿಕಾ ರಾಣಿಯ ಪೋಷಾಕಿನಲ್ಲಿ ಅಬ್ಬರಿಸುತ್ತಾರೆ. ಆಕೆಯನ್ನು ಬಂಧಿಸುವ ಪ್ರಯತ್ನಗಳನ್ನೂ ಟ್ರೈಲರ್ ನಲ್ಲಿ ಕಾಣಬಹುದು. ಟ್ರೈಲರ್ ನೋಡಿದರೆ ಚಿತ್ರ ಅರುಂಧತಿ ಕಥೆಯನ್ನು ಹೋಲುತ್ತದೆ ಎಂಬ ಅನುಮಾನ ಬರುತ್ತದೆ. ಒಟ್ಟಿನಲ್ಲಿ ರಾಧಿಕಾ ಹೊಸ ಪಾತ್ರಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.
ಟ್ರೈಲರ್ ನಲ್ಲಿ ಆಧುನಿಕ ಯುವತಿ ಮತ್ತು ರಾಣಿಯಾಗಿ ರಾಧಿಕಾ ಗಮನ ಸೆಳೆದಿದ್ದಾರೆ. ಚಿತ್ರದ ಮೂಲಕ ರಾಧಿಕಾ ಮತ್ತೊಂದು ಇನ್ನಿಂಗ್ಸ್ ಆರಂಭಿಸಬಹುದು ಎಂದು ಹೇಳಲಾಗುತ್ತಿದೆ. ರಾಧಿಕಾರ ಈ ಪ್ರಯತ್ನವನ್ನು ಪ್ರೇಕ್ಷಕ ಎಷ್ಟರ ಮಟ್ಟಿಗೆ ಸ್ವೀಕರಿಸಲಿದ್ದಾರೆ ಎಂದು ನೋಡಬೇಕಿದೆ.
ಚಿತ್ರದ ಮಲಯಾಳಂ ಆವೃತ್ತಿಯ ಪೋಸ್ಟರ್ ಗುರುವಾರ, ಅ.17 ರಂದು ಬಿಡುಗಡೆಯಾಗಿತ್ತು. ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ಪೋಸ್ಟರ್ ಬಿಡುಗಡೆಗೊಳಿಸಿದ್ದರು.
ಅ.7 ರಂದು ನಟಿ ರಾಧಿಕಾರ ದಮಯಂತಿ ಚಿತ್ರದ 2 ನೇ ಲುಕ್ ಬಿಡುಗಡೆಯಾಗಿತ್ತು. ದಸರಾ ಹಿನ್ನೆಲೆಯಲ್ಲಿ ಚಿತ್ರದ ಸೆಕೆಡ್ ಲುಕ್ ನ್ನು ರಿಲೀಸ್ ಮಾಡಲಾಗಿತ್ತು, ಚಿತ್ರದ ಟೀಸರ್ ನ ಕನ್ನಡ ಆವೃತ್ತಿ ಸೆ.20 ರಂದು ಬಿಡುಗಡೆಯಾಗಿತ್ತು.
ಅರಮನೆಯೊಂದರಲ್ಲಿ ರಾತ್ರಿಯ ವೇಳೆ ಕೆಂಪು ಸೀರೆಯನ್ನು ಧರಿಸಿದ ರಾಣಿಯ ಅವತಾರದಲ್ಲಿ ಕಾಣುವ ರಾಧಿಕಾ ಸಿಂಹಾಸನದ ಮೇಲೆ ಕುಳಿತುಕೊಂಡು ಗಂಭೀರ ನೋಟ ಬೀರುವುದನ್ನು ಟೀಸರ್ ನಲ್ಲಿ ತೋರಿಸಲಾಗಿತ್ತು.
ಚಿತ್ರದಲ್ಲಿ ರಾಧಿಕಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಭಜರಂಗಿ ಖ್ಯಾತಿಯ ಲೋಕಿ, ಸಾಧು ಕೋಕಿಲ, ತಬಲಾ ನಾಣಿ, ಮಿತ್ರ, ಮಜಾ ಟಾಕೀಸ್ ನ ಪವನ್ ಮತ್ತು ಇತರರನ್ನು ಒಳಗೊಂಡಿದೆ.
ಚಿತ್ರವನ್ನು ನವರಸನ್ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ. ಅಲ್ಲದೆ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ಶ್ರೀ ಲಕ್ಷ್ಮಿ ವೃಶಾದ್ರಿ ಪ್ರೊಡೊಕ್ಷನ್ ಸಂಸ್ಥೆ ನಿರ್ಮಾಣ ಮಾಡಿದೆ. ಆರ್ ಎಸ್ ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪಿ ಕೆ ಎಚ್ ದಾಸ್ ಅವರ ಕ್ಯಾಮರಾ ಕೈಚಳಕ ಇದೆ.
ದಮಯಂತಿ ಭಯಾನಕ, ಕುತೂಹಲಕಾರಿ ಮತ್ತು ಹಾಸ್ಯ ಭರಿತ ಚಿತ್ರವಾಗಿದೆ. ಇದು 80 ರ ದಶಕದ ಚಿತ್ರವಾಗಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು ರಾಧಿಕಾ ಕುಮಾರಸ್ವಾಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ತನ್ನ ತಂದೆಯ ನಂತರದಲ್ಲಿ ಮಗಳು ಹೇಗೆ ರಾಜ್ಯಭಾರ ಮಾಡುತ್ತಾಳೆ ಎಂಬ ಕಥೆಯನ್ನು ಚಿತ್ರ ಒಳಗೊಂಡಿದೆ. ದಮಯಂತಿ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ವಿಸಿದೆ. ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂಗಳಲ್ಲಿ ಬಿಡುಗಡೆಯಾಗಲಿದೆ.
key words: Radhika Kumaraswamy- Damayanti-Trailer- Release.