ರಾಯಚೂರು ಅಭಿವೃದ್ಧಿಗೆ ರೂ. 3000 ಕೋಟಿ

ರಾಯಚೂರು:ಜೂ-27: ಜಿಲ್ಲೆಯ ಕರೇಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಗೆ ವಿಶೇಷ ಯೋಜನೆ, ಅನುದಾನ ಘೊಷಿಸುವ ನಿರೀಕ್ಷೆ ಜನರಲ್ಲಿತ್ತು. ಆದರೆ, ಸಿಎಂ ಈ ಹಿಂದೆ ಘೊಷಿಸಿದ್ದ ಜಲಧಾರೆ ಯೋಜನೆಗೆ ರಾಯಚೂರು ಜಿಲ್ಲೆ ಆಯ್ಕೆ ಹಾಗೂ ಬಜೆಟ್​ನಲ್ಲಿ ಜಿಲ್ಲೆಗೆ ಮಂಜೂರು ಮತ್ತು ಬಿಡುಗಡೆಯಾದ 3000 ಕೋಟಿ ರೂ. ಅನುದಾನಗಳ ಬಗ್ಗೆ ಪ್ರಸ್ತಾಪಿಸಿ ಜಿಲ್ಲೆಯ ಜನರ ನಿರೀಕ್ಷೆ ಹುಸಿಗೊಳಿಸಿದರು.

ಭಾಷಣದುದ್ದಕ್ಕೂ ಬಜೆಟ್​ನಲ್ಲಿ ಜಿಲ್ಲೆಗೆ ನೀಡಿರುವ ಅನುದಾನದ ಬಗ್ಗೆ ವಿವರಿಸುವ ಜತೆಗೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯವರು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಪ ಮಾಡುವ ಬದಲು ರಾಜ್ಯಕ್ಕೆ ಬರಬೇಕಾದ ಅನುದಾನ ಬಿಡುಗಡೆಗೆ ಕಾರ್ಯಕರ್ತರನ್ನು ದೆಹಲಿಗೆ ಕರೆದುಕೊಂಡು ಹೋಗಲಿ. ಆಗ ಸರ್ಕಾರದ ವತಿಯಿಂದಲೇ ವಿಶೇಷ ರೈಲಿನ ವ್ಯವಸ್ಥೆ ಮಾಡುವುದಾಗಿ ಟಾಂಗ್ ಕೊಟ್ಟರು.

ಜಲಧಾರೆ ಯೋಜನೆಯಲ್ಲಿ ರಾಯಚೂರು, ವಿಜಯಪುರ ಜಿಲ್ಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದ್ದು, 1,500 ಕೋಟಿ ರೂ. ನೀಡುವ ಮೂಲಕ ಹಳ್ಳಿಗಳಿಗೆ ನದಿ ಮೂಲದಿಂದ ಕುಡಿಯುವ ನೀರು ಒದಗಿಸುವ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ನವಲಿ ಹತ್ತಿರ ಸಮಾನಾಂತರ ಜಲಾಶಯ ನಿರ್ವಿುಲಾಗುತ್ತಿದ್ದು, ಎಷ್ಟೇ ಅನುದಾನ ಬೇಕಾದರೂ ನೀಡಲು ಸಿದ್ಧ. ಅದಕ್ಕೆ ತೆಲಂಗಾಣ, ಆಂಧ್ರ ಸಿಎಂಗಳ ಜತೆಗೆ ರ್ಚಚಿಸುವೆ ಎಂದರು.

ಮುಂದಿನ ವರ್ಷದಿಂದ ಹಿರಿಯ ನಾಗರಿಕರಿಗೆ ಒಂದು ಸಾವಿರದಿಂದ 2 ಸಾವಿರ ರೂ. ಹಾಗೂ ಅಂಗವಿಕಲರಿಗೆ 2,500 ರೂ.ಗೆ ಮಾಸಾಶನವನ್ನು ಹೆಚ್ಚಳ ಮಾಡಲಾಗುವುದು.

| ಕುಮಾರಸ್ವಾಮಿ, ಮುಖ್ಯಮಂತ್ರಿ

ಕಾರ್ಯಕ್ರಮ ವಿಳಂಬ

ಬೆಂಗಳೂರಿನಿಂದ ಉದ್ಯಾನ ಎಕ್ಸ್​ಪ್ರೆಸ್ ಮೂಲಕ ರಾಯಚೂರಿಗೆ ಆಗಮಿಸಿದ್ದ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೆಳಗ್ಗೆ 10.30ಕ್ಕೆ ಕರೇಗುಡ್ಡ ಗ್ರಾಮಕ್ಕೆ ಆಗಮಿಸಬೇಕಾಗಿತ್ತು. ಆದರೆ, ವೈಟಿಪಿಎಸ್ ಕಾರ್ವಿುಕರ ಪ್ರತಿಭಟನೆಯಿಂದ ಕರೇಗುಡ್ಡ ತಲುಪುವ ಹೊತ್ತಿಗೆ ಮಧ್ಯಾಹ್ನ 3 ಗಂಟೆಯಾಗಿತ್ತು. ಬೆಳಗ್ಗೆಯಿಂದ ಸಿಎಂ ಬರುವಿಕೆಗಾಗಿ ಕಾದು ಕುಳಿತಿದ್ದ ಜನ ಬೇಸತ್ತಿದ್ದರು. ಗ್ರಾಮದ ಮಹಾಂತೇಶ್ವರ ಮಠಕ್ಕೆ ಭೇಟಿ ನೀಡಿ ಸಿಎಂ ವೇದಿಕೆಗೆ ಬರುವಷ್ಟರಲ್ಲಿ ಮಧ್ಯಾಹ್ನ 3.30 ಆಗಿದ್ದು, ಭಾಷಣ ಮುಗಿದು ಅಹವಾಲು ಸ್ವೀಕಾರ ಸಂಜೆ 5ಕ್ಕೆ ಆರಂಭವಾಯಿತು. ನೂಕು ನುಗ್ಗಲುನಿಂದಾಗಿ ಅಸ್ತವ್ಯಸ್ತವಾಯಿತು. ರಾತ್ರಿ 7 ಗಂಟೆ ನಂತರವೂ ಅಹವಾಲು ಸಲ್ಲಿಕೆ ಮುಂದುವರಿದಿತ್ತು. ಮಾನ್ವಿ ಕ್ಷೇತ್ರದಲ್ಲಿನ ರೂ. 79.99 ಕೋಟಿ ವೆಚ್ಚದ 30 ಕಾಮಗಾರಿಗಳಿಗೆ ಶಂಕುಸ್ಥಾಪನೆ, ರೂ. 81.44 ಕೋಟಿ ವೆಚ್ಚದ 38 ಕಾಮಗಾರಿಗಳನ್ನು ಉದ್ಘಾಟಿಸಿದ ಸಿಎಂ, ಮಾನ್ವಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬೇಕಾದ ಎಲ್ಲ ಸಹಕಾರ ನೀಡುವ ಆಶ್ವಾಸನೆಯಿತ್ತರು.

ಮುಖ್ಯಮಂತ್ರಿಗೆ ಪ್ರತಿಭಟನೆಯ ಬಿಸಿ

ಸಿಎಂ ಗ್ರಾಮ ವಾಸ್ತವ್ಯಕ್ಕೆ ಪ್ರತಿಭಟನೆಯ ಬಿಸಿ ತಟ್ಟಿತು. ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗೂಗಲ್​ನಿಂದ ಕರೇಗುಡ್ಡದವರೆಗೆ ಸಾವಿರಾರು ಜನರೊಂದಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಗ್ರಾಮದಿಂದ 15 ಕಿ.ಮೀ.ದೂರದಲ್ಲಿರುವ ಬಲ್ಲಟಗಿ ಗ್ರಾಮದಲ್ಲಿದ್ದಾಗ ಗ್ರಾಮವಾಸ್ತವ್ಯದಲ್ಲಿ ಗೊಂದಲವಾಗಬಾರದು ಎನ್ನುವ ಕಾರಣಕ್ಕೆ ಜಿಲ್ಲಾಧಿಕಾರಿ ಬಿ.ಶರತ್ ನಿಷೇಧಾಜ್ಞೆ ಜಾರಿಗೊಳಿಸಿದರು. ಅದರಿಂದ ಶಾಲೆ ಆವರಣದಲ್ಲಿ ಸೇರಿದ್ದ ಪ್ರತಿಭಟನಾಕಾರರು ಮುಂದೆ ಹೋಗದಂತೆ ಪೊಲೀಸರು ತಡೆ ಹಿಡಿದಿದ್ದರು. ನಂತರ ರಸ್ತೆ ಮೂಲಕ ಹೋದರೆ ಬಂಧಿಸುವ ಭೀತಿಯಿಂದ ಶಾಸಕ ಕೆ.ಶಿವನಗೌಡ ನಾಯಕ ಹೊಲದ ಮಾರ್ಗದಲ್ಲಿ ಕರೇಗುಡ್ಡದತ್ತ ಹೋಗಲು ಮುಂದಾದಾಗ ಬಸವಣ್ಣ ಕ್ಯಾಂಪ್ ಹತ್ತಿರ ಬಂಧಿಸಿ, ಸಿರವಾರ ಪೊಲೀಸ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಾನು ಹೋದಲ್ಲೆಲ್ಲ್ಲ ಬಿಜೆಪಿ ನಾಯಕರು, ಕಾರ್ಯಕರ್ತರು ಮೋದಿ ಘೊಷಣೆ ಕೂಗುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ. ನೈತಿಕತೆ ಇದ್ದಲ್ಲಿ ಮೋದಿ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಿಕೊಂಡು ಬರಲಿ ಎಂದು ಸವಾಲು ಹಾಕಿದರು.
ಕೃಪೆ:ವಿಜಯವಾಣಿ

ರಾಯಚೂರು ಅಭಿವೃದ್ಧಿಗೆ ರೂ. 3000 ಕೋಟಿ
raichur-development-rs-3000-crores-says-h-d-kumaraswamy