ಮೈಸೂರು,ಮಾರ್ಚ್,31,2025 (www.justkannada.in): ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ವಿವಿಧೆಡೆ ಐಸ್ ಕ್ರೀಮ್ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲಿಸಿ ನೋಟಿಸ್ ಜಾರಿ ಮಾಡಿ ದಂಡ ವಿಧಿಸಿದರು.
ಆಹಾರ ಸುರಕ್ಷತಾ ಅಧಿಕಾರಿಗಳಾದ ಡಾ. ರವಿಕುಮಾರ್ ನೇತೃತ್ವದಲ್ಲಿ ಹ್ಯಾಂಡ್ ಪೋಸ್ಟ್ ಮತ್ತು ಹಂಪಾಪುರ ಗ್ರಾಮದಲ್ಲಿರುವ ಐಸ್ ಕ್ರೀಮ್ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳ ತಂಡವು ಪ್ರತಿಯೊಂದು ಕಂಪನಿಯ ಐಸ್ ಕ್ರೀಮ್ ಗಳನ್ನು ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಿ ದಂಡ ವಿಧಿಸಿದರು.
ಈ ವೇಳೆ ಮಾತನಾಡಿದ ಆಹಾರ ಸುರಕ್ಷತಾಧಿಕಾರಿ ಡಾ. ರವಿಕುಮಾರ್, ಐಸ್ ಕ್ರೀಮ್ ಗಳನ್ನು ತಯಾರಿಸುವಾಗ ಶುದ್ಧವಾದ ನೀರನ್ನು ಉಪಯೋಗಿಸಬೇಕು. ಯಾವುದೇ ರೀತಿಯ ಬಣ್ಣಗಳನ್ನು ಹಾಕಬಾರದು. ಐಸ್ ಕ್ರೀಮ್ ತಯಾರಿಸುವ ಸ್ಥಳಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಕಡ್ಡಾಯವಾಗಿ ಫುಡ್ ಲೈಸನ್ಸ್ ಅನ್ನು ಒಂದು ವಾರದೊಳಗೆ ತೆಗೆದುಕೊಳ್ಳಬೇಕು. ಫುಡ್ ಲೈಸೆನ್ಸ್ ಪಡೆಯದೇ ಐಸ್ ಕ್ರೀಮ್ ತಯಾರಿಸಬಾರದು. ತಪ್ಪಿದರೆ ದಂಡ ವಿಧಿಸಲಾಗುತ್ತದೆ ಹಾಗೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ರವಿರಾಜ್, ನಾಗೇಶ್ ಮತ್ತು ಪ್ರತಾಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Key words: mysore, Raid, ice cream, manufacturing units