ಬೆಂಗಳೂರು, ನವೆಂಬರ್ 15, 2021 (www.justkannada.in): ಮುಂದಿನ ಏಳು ದಿನಗಳವರೆಗೆ ವಹಿವಾಟು ಕಡಿಮೆ ಇರುವ ಸಮಯದಲ್ಲಿ ಆರು ಗಂಟೆಗಳ ಕಾಲ ರೈಲ್ವೆ ಪ್ರಯಾಣಿಕರ ರಿಸರ್ವೇಶನ್ ವ್ಯವಸ್ಥೆ (ಪಿಆರ್ಎಸ್) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.
ರೈಲ್ವೆ ಇಲಾಖೆಯ ಒಂದು ಹೇಳಿಕೆ ಪ್ರಕಾರ, ಪ್ರಯಾಣಿಕ ಸೇವೆಗಳನ್ನು ಸುಧಾರಿಸಲು ಹಾಗೂ ಹಂತ ಹಂತವಾಗಿ ಸೇವೆಗಳನ್ನು ಕೋವಿಡ್ ಪೂರ್ವ ಅವಧಿಯ ಪ್ರಕಾರ ಮರಳಿಸುವ ರೈಲ್ವೆ ಇಲಾಖೆಯ ಪ್ರಯತ್ನಗಳ ಭಾಗವಾಗಿ ಮುಂದಿನ ಏಳು ದಿನಗಳ ಕಾಲ ವಹಿವಾಟುಗಳು ಕಡಿಮೆ ಇರುವ ಸಮಯದಲ್ಲಿ, ಅಂದರೆ ರಾತ್ರಿ ವೇಳೆಯಲ್ಲಿ ಆರು ಗಂಟೆಗಳ ಕಾಲ ಪಿಆರ್ಎಸ್ ಅನ್ನು ಸ್ಥಗಿತಗೊಳಿಸಲಾಗುವುದು.
ಸಿಸ್ಟಂನ ಡೇಟಾ ಉನ್ನತೀಕರಣ ಹಾಗೂ ಹೊಸ ರೈಲುಗಳ ಸಂಖ್ಯೆಗಳನ್ನು ಸೇರ್ಪಡೆಗೊಳಿಸುವುದು, ಇತ್ಯಾದಿಗಳಂತಹ ಉನ್ನತೀಕರಣ ಕೆಲಸಗಳಿಗಾಗಿ ಈ ಕ್ರಮ ಅನಿವಾರ್ಯವಾಗಿದೆ. ಅಪಾರ ಪ್ರಮಾಣದಲ್ಲಿ ಎಲ್ಲಾ ಮೇಲ್/ ಎಕ್ಸ್ಪ್ರೆಸ್ ರೈಲುಗಳ ವಿವರಗಳು ಹಿಂದಿನ (ಹಳೆಯ ರೈಲು ಸಂಖ್ಯೆಗಳು) ಹಾಗೂ ಹಾಲಿ ಪ್ರಯಾಣಿಕರ ಬುಕ್ಕಿಂಗ್ ಡಾಟಾಗಳನ್ನು ಅಪ್ ಡೇಟ್ ಮಾಡಬೇಕಿದ್ದು, ಈ ಕ್ರಮವನ್ನು ಬಹಳ ಎಚ್ಚರಿಕೆಯಿಂದ ಯೋಜಿತ ರೀತಿಯಲ್ಲಿ ಹಂತಹಂತವಾಗಿ ಮಾಡಬೇಕಾದ ಅಗತ್ಯವಿದೆ. ಹಾಗಾಗಿ ಟಿಕೆಟ್ ಗಳನ್ನು ಬುಕ್ ಮಾಡುವ ಪ್ರಕ್ರಿಯೆಲ್ಲಿ ತೊಂದರೆ ಆಗುವುದನ್ನು ತಪ್ಪಿಸುವ ಉದ್ದೇಶದೊಂದಿಗೆ ಈ ಪ್ರಕ್ರಿಯೆಯನ್ನು ರಾತ್ರಿ ವೇಳೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಪ್ರಕ್ರಿಯೆ ನವೆಂಬರ್ 14 ಹಾಗೂ 15ರಿಂದ ಆರಂಭಿಸಿ ನವೆಂಬರ್ 20 ಹಾಗೂ 21ರವರೆಗೆ ಮಧ್ಯರಾತ್ರಿ ೨೩:೩೦ ರಿಂದ ಬೆಳಿಗನ ಜಾವ ೦೫:೩೦ರ ನಡುವೆ ನಡೆಸಲಾಗುತ್ತದೆ. ಈ ಆರು ಗಂಟೆಗಳ ಅವಧಿಯಲ್ಲಿ ಪಿಆರ್ಎಸ್ ಸೇವೆಗಳು (ಟಿಕೆಟ್ ರಿಸರ್ವೇಷನ್, ಕರೆಂಟ್ ಬುಕ್ಕಿಂಗ್, ಕ್ಯಾನ್ಸಲೇಷನ್, ಎನ್ಕ್ವೈರಿ ಸೇವೆಗಳು, ಇತ್ಯಾದಿ) ಲಭ್ಯವಿರುವುದಿಲ್ಲ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Railway Passenger –Reservation- System- shut- six hours.