ಮಳೆರಾಯನ ಅಬ್ಬರ: ಕೊಡಗು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಕೊಡಗು, ಜೂನ್, 27, 2024 (www.justkannada.in): ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು ಕಬಿನಿ, ಕಾವೇರಿ ಕೊಳ್ಳದಲ್ಲಿ ವರುಣಾರ್ಭಟ ಜೋರಾಗಿದೆ. ಕೊಡಗಿನ ಹಲವೆಡೆ  ಮಳೆಯ ಅಬ್ಬರ  ಜೋರಾದ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಜಿಲ್ಲಾದ್ಯಂತ  ಅಂಗನವಾಡಿ ಸೇರಿದಂತೆ ಶಾಲೆಗಳಿಗೆ ಮಾತ್ರ ಇಂದು ರಜೆ ಘೋಷಣೆ ಮಾಡಲಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢ   ಶಾಲೆಗಳಿ ಮಾತ್ರ ರಜೆ  ಘೋಷಣೆ ಮಾಡಲಾಗಿದೆ.

ಭಾಗಮಂಡಲ ತಲಕಾವೇರಿಯಲ್ಲಿ‌ ಹೆಚ್ಚಾದ ಮಳೆ ನದಿ ನೀರಿನ ಮಟ್ಟಹೆಚ್ಚಳವಾಗಿದ್ದು ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ತುಂಬಿಹರಿಯುತ್ತಿವೆ. ಕೊಡಗಿನಲ್ಲಿ ನಾಲ್ಕು ದಿನ ರೆಡ್ ಆಲರ್ಟ್ ಘೋಷಣೆ ಮಾಡಲಾಗಿದೆ.

ಕೊಡಗು, ಕಬಿನಿ ಜಲಾನಯನ ಪ್ರದೇಶ ಕೇರಳಾ, ವೈನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಕಾವೇರಿ, ಕಬಿನಿ ಜಲಾನಯನ ಪ್ರದೇಶಗಳು ಮೈದುಂಬಿವೆ. ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.  ಕಬಿನಿ ಜಲಾಶಯದ ಇಂದಿನ ಒಳ ಹರಿವು 17 ಸಾವಿರ ಕ್ಯೂಸೆಕ್, ಹೊರ ಹರಿವು 1000 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟ 2270 ಅಡಿ ತಲುಪಿದ್ದು, ಭರ್ತಿಯಾಗಲು ಕೇವಲ 14 ಅಡಿಗಳು ಮಾತ್ರ ಬಾಕಿ ಉಳಿದಿದೆ. ಹೀಗೆ ಮಳೆ ಮುಂದುವರೆದರೆ ಇನ್ನೆರಡು ಮೂರು ದಿನಗಳಲ್ಲಿ ಅದು ಸಹ ಭರ್ತಿಯಾಗುವ ಸಾಧ್ಯತೆ ಇದೆ.

ಕೆಆರ್ ಎಸ್ ಜಲಾಶಯದ ಒಳಹರಿವಿನಲ್ಲೂ ಕ್ರಮೇಣ ಹೆಚ್ಚಳವಾಗಿದ್ದು, ಇಂದಿನ‌ ಒಳಹರಿವಿನಲ್ಲಿ ಏರಿಕೆಯಾಗಿದೆ. ಇಂದಿನ ಒಳ ಹರಿವು 3856 ಕ್ಯೂಸೆಕ್  ಇದ್ದು, 472 ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ.

Key words: rain-Kodagu-KRS-Kabini-dam