ಮಳೆಗಾಲ, ಸಾಕಷ್ಟು ತೊಂದರೆ: ಸರ್ಕಾರ ಬೇಗ ಪಾಲಿಕೆ ಚುನಾವಣೆ ಘೋಷಿಸಲಿ- ಮಾಜಿ ಮೇಯರ್ ಶಿವಕುಮಾರ್.

ಮೈಸೂರು,ಮೇ,29,2024 (www.justkannada.in): ರಾಜ್ಯದಲ್ಲಿ ಮಳೆಗಾಲ ಶುರುವಾಗಲಿದ್ದು ಇದರಿಂದ ಸಾಕಷ್ಟು ತೊಂದರೆಯಾಗಲಿದೆ. ಹೀಗಾಗಿ  ಸರ್ಕಾರ ಬೇಗ ಪಾಲಿಕೆ ಚುನಾವಣೆ ಘೋಷಿಸಲಿ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಶಿವಕುಮಾರ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಿವಕುಮಾರ್, ಪಾಲಿಕೆಯು ಮುಂಜಾಗ್ರತಾ ಕ್ರಮದೊಂದಿಗೆ ಮಳೆಗಾಲ ಎದುರಿಸಲು ಸಿದ್ದವಾಗಬೇಕು. ಕಳೆದ ಬಾರಿ ಮಳೆ ಬಂದಾಗಲೇ ಸಾಕಷ್ಟು ಅನಾಹುತ ಸಂಭವಿಸಿವೆ. ರಸ್ತೆಗಳಿಗೆ ಬಿದ್ದಿರುವ ಮರಗಳನ್ನ ಈಗಲೂ ತೆರವು ಮಾಡಿಲ್ಲ. ಬೀಳುವ ಹಂತದಲ್ಲಿರುವ ಮರಗಳನ್ನ ತೆರವು ಮಾಡಬೇಕು. ಯುಜಿಡಿ ಸಮಸ್ಯೆಗಳನ್ನ ಬಗೆಹರಿಸಬೇಕು. ರಾಜಕಾಲುವೆ ಹೂಳು ತೆಗೆಸಲು ಮುಂದಾಗಬೇಕು. ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಸಮಸ್ಯೆ ಎದುರಾಗುತ್ತದೆ. ಮೈಸೂರಿಗೆ ಸ್ವಚ್ಛ ನಗರಿ ಎಂಬ ಹೆಸರಿದೆ. ಆ ಹೆಸರನ್ನ ಉಳಿಸುವಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಅನಿವಾರ್ಯ. ಸರ್ಕಾರ ಆದಷ್ಟು ಬೇಗ ಚುನಾವಣೆ ಪಾಲಿಕೆ ಚುನಾವಣೆ ಘೋಷಣೆ ಮಾಡಲಿ. ಮೈಸೂರು ನಗರದಲ್ಲಿ ಪಾಲಿಕೆ ಸದಸ್ಯರು ಇಲ್ಲದೆ ಸಾಕಷ್ಟು ತೊಂದರೆಯಾಗುತ್ತಿದೆ. ಯುಜಿಡಿ ಸಮಸ್ಯೆಯಾದರೆ ವಾರಗಟ್ಟಲೆ ಪಾಲಿಕೆಗೆ ಜನರು ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸಿದ್ದರಾಮಯ್ಯರಲ್ಲಿ ನಾನು ಮನವಿ ಮಾಡುತ್ತೇನೆ. ಆದಷ್ಟು ಬೇಗ ಪಾಲಿಕೆ ಚುನಾವಣೆ ನಡೆಸಲಿ ಎಂದು  ಮಾಜಿ ಮೇಯರ್ ಶಿವಕುಮಾರ್ ಹೇಳಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಮೈತ್ರಿ ಅಭ್ಯರ್ಥಿ ಗೆಲ್ಲುವ ವಾತಾವರಣ ಇದೆ. ಈ ಹಿಂದೆ ಮೂರು ಪಕ್ಷಗಳ ನಡುವೆ ಪೈಪೋಟಿ ಇತ್ತು. ಈಗ ಬಿಜೆಪಿ ಜೆಡಿಎಸ್ ಮೈತ್ರಿಯಾಗಿದೆ. ಎರಡು ಪಕ್ಷಗಳ ಮತಗಳು ನಮಗೆ ಸಿಗುತ್ತವೆ. ಹಾಗಾಗಿ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ. ಈಗಿನ ಪರಿಸ್ಥಿತಿ ನೋಡಿದ್ರೆ ಈ ಮೈತ್ರಿ ಮುಂದಿನ ದಿನಗಳಲ್ಲೂ ಮುಂದುವರೆಯುತ್ತದೆ. ಪಾಲಿಕೆ ಚುನಾವಣೆಯಲ್ಲೂ ಸಹ ಬಿಜೆಪಿ ಜೆಡಿಎಸ್ ಮೈತ್ರಿ ಇರುತ್ತೆ. ಪಕ್ಷದ ವರಿಷ್ಠರು ಇದ್ದಾರೆ ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಶಿವಕುಮಾರ್ ಹೇಳಿದರು.

Key words: rain, mysore, Former mayor, Shivakumar