ಬೆಂಗಳೂರು, ಮೇ 7, 2022 (www.justkannada.in): ಬೆಂಗಳೂರಿನ ಬೈಯ್ಯಪ್ಪನಹಳ್ಳಿಯ ಮೆಟ್ರೋ ನಿಲ್ದಾಣದ ೩ನೇ ಪ್ಲಾಟ್ಫಾರಂನಿಂದ ಬಿಎಂಆರ್ಸಿಎಲ್ ವತಿಯಿಂದ ರೈಲುಗಳ ಓಡಾಟವನ್ನು ಪ್ರಾರಂಭಿಸಿದ ಕೇವಲ ಎರಡು ತಿಂಗಳಲ್ಲಿ, ಮೆಟ್ರೊ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಮಾರ್ಗದಲ್ಲಿ ಓಡಾಡುವ ಒಂದು ಮೆಟ್ರೊ ರೈಲಿನ ಎರಡು ಬೋಗಿಗಳಲ್ಲಿ ಮಳೆ ನೀರು ನುಗ್ಗಿರುವ ಘಟನೆ ವರದಿಯಾಗಿದೆ.
ಮಳೆ ನೀರು ರೈಲಿನ ಬೋಗಿಗಳನ್ನು ಪ್ರವೇಶಿಸುತ್ತಿರುವಂತೆಯೇ ಪ್ರಯಾಣಿಕರು ಕೋಚ್ ಗಳ ನೆಲದ ಮೇಲೆ ನಿಂತಿರುವ ಮಳೆ ನೀರಿನಿಂದಾಗಿ ಅಪಾಯ ಸಂಭವಿಸುವ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
ಮಾರ್ಚ್ ೨ರಿಂದ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಪ್ಲಾಟ್ ಫಾರಂ 3ರಿಂದ ರೈಲುಗಳ ಓಡಾಟವನ್ನು ನಡೆಸುತ್ತಿದೆ. ಇದು ಫೀಡರ್ ಟ್ರ್ಯಾಂಕ್ ಆಗಿದೆ. ೨ನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ವೈಟ್ಫೀಲ್ಡ್ ಮಾರ್ಗದೊಂದಿಗೆ ಈ ನಿಲ್ದಾಣದ ಮೊದಲ ಎರಡು ಪ್ಲಾಟ್ ಫಾರಂಗಳನ್ನು ಸಂಪರ್ಕಿಸುವ ಕೆಲಸ ಜಾರಿಯಲ್ಲಿರುವ ಕಾರಣದಿಂದಾಗಿ ಅದಕ್ಕೆ ಅನುಕೂಲ ಮಾಡಿಕೊಡಲು ನಿಲ್ದಾಣದ ೩ನೇ ಪ್ಲಾಟ್ ಫಾರಂನಿಂದ ರೈಲುಗಳ ಓಡಾಟವನ್ನು ಪ್ರಾರಂಭಿಸಲಾಯಿತು.
ಪ್ಲಾಟ್ ಫಾರಂ ೩ರ ಒಂದು ಭಾಗದಲ್ಲಿ ಮೇಲ್ಛಾವಣಿ ಇಲ್ಲ. ಈ ಕಾರಣದಿಂದಾಗಿ ಮಳೆಯಾದರೆ ರೈಲಿನ ಕೊನೆಯ ಎರಡು ಬೋಗಿಗಳಿಗೆ ಮಳೆ ನೀರು ಪ್ರವೇಶಿಸುತ್ತದೆ. ಹಾಗಾಗಿ ಪ್ರಯಾಣಿಕರು ನೀರು ಪ್ರವೇಶಿಸದೇ ಇರುವ ಇತರೆ ಬೋಗಿಗಳಲ್ಲಿ ಕುಳಿತುಕೊಂಡು ಪ್ರಯಾಣಿಸಬೇಕಾಗುತ್ತಿದೆ.
ಇದು ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಅದರಲ್ಲಿಯೂ ವಿಶೇಷವಾಗಿ ಹಿರಿಯ ನಾಗರಿಕರ ಸುರಕ್ಷತೆಗೆ, ಹಾಗೂ ಸಾರ್ವಜನಿಕರ ಹಣದಿಂದ ನಿರ್ಮಿಸಿರುವ ನಮ್ಮ ಮೆಟ್ರೊ ರೈಲುಗಳ ನಿರ್ವಹಣೆಯ ನಿಟ್ಟಿನಲ್ಲಿ ಬಿಎಂಆರ್ಸಿಎಲ್ ತೋರಿಸುತ್ತಿರುವ ನಿರ್ಲಕ್ಷ್ಯ ಎನ್ನುವುದು ಪ್ರಯಾಣಿಕರ ದೂರಾಗಿದೆ.
“ಅಧಿಕಾರಿಗಳಿಗೆ ಈ ಲೋಪದ ಕುರಿತು ಮುಂಚೆಯೇ ಮಾಹಿತಿ ಇತ್ತು. ಆದರೆ ಪ್ಲಾಟ್ ಫಾರಂನ ಉಳಿದ ಭಾಗದಲ್ಲಿ ಮೇಲ್ಛಾವಣಿಯನ್ನು ಏಕೆ ನಿರ್ಮಿಸಲಿಲ್ಲ? ಮೆಟ್ರೊ ರೈಲಿನ ಒಳಗಿನ ನೆಲ ಬಹಳ ನಯವಾಗಿರುತ್ತದೆ. ಇಂತಹ ಜಾಗದಲ್ಲಿ ನೀರು ನಿಂತರೆ ಜನರು ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಯಾರಿಗಾದರೂ ಅಪಾಯವಾದರೆ ಯಾರು ಹೊಣೆ?” ಎಂದು ಕೆಂಗೇರಿಗೆ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕರು, ಈ ಕುರಿತು ಮಾಧ್ಯಮದವರು ಕೇಳಿದ ಅಭಿಪ್ರಾಯಕ್ಕೆ ಉತ್ತರಿಸಿದ್ದಾರೆ.
ಈ ಸಂಬಂಧ ಬಿಎಂಆರ್ಸಿಎಲ್ ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ್ ಚವ್ಹಾಣ್ ಅವರನ್ನು ಸಂಪರ್ಕಿಸಿದಾಗ ಅವರು, ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು. ಜೊತೆಗೆ, ಮಳೆ ನೀರಿನಿಂದಾಗಿ ಮೆಟ್ರೊ ರೈಲುಗಳ ವಿದ್ಯುತ್ ಮೂಲಭೂತಸೌಕರ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Rain-water – namma metro-bangalore