ಉಡುಪಿ, ಸೆಪ್ಟೆಂಬರ್,20,2020(www.justkannada.in) : ಉಡುಪಿ ಜಿಲ್ಲೆಯಲ್ಲಿ ಬಾರಿ ಮಳೆಯಿಂದಾಗಿ ಅನೇಕ ಗ್ರಾಮಗಳು ಜಾಲಾವೃತಗೊಂಡಿದ್ದು, ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೂಚಿಸಿದ್ದಾರೆ.
ಭಾರಿ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ರಕ್ಷಿಸುವ ಉದ್ದೇಶದಿಂದ ರಕ್ಷಣಾ ಇಲಾಖೆಯ ಹೆಲಿಕಾಪ್ಟರ್ ಒಂದನ್ನು ನಿಯೋಜಿಸುವ ಸಂಬಂಧ ಚರ್ಚಿಸಿದ್ದು, ಎಸ್ ಡಿ ಆರ್ ಎಫ್ ತಂಡವನ್ನು ಕರೆಸಿಕೊಳ್ಳಲಾಗಿದ್ದು, ಸುಮಾರು 200ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶನಿವಾರ ರಾತ್ರಿಯಿಂದಲೇ ಗುಂಡಿಬೈಲು, ಮಠದ ಬೆಟ್ಉ, ಅಂಬಲಪಾಡಿ, ಬನ್ನಂಜೆ, ಗರಡಿ,ಕಾಪು ಸೇರಿದಂತೆ ಹಲವು ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಅಪಾಯಕ್ಕೆ ಸಿಲುಕಿದ ಸಾರ್ವಜನಿಕರು 1077 ಕಂಟ್ರೋಲ್ ರೂಂ ಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪದವಿ ಪರೀಕ್ಷೆ ಮುಂದೂಡಿಕೆ
ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ನಾಳೆ ನಡೆಯಬೇಕಿದ್ದ ಪದವಿ ಅಂತಿಮ ಪರೀಕ್ಷೆಯನ್ನು ಮುಂಜಾಗೃತ ಕ್ರಮವಾಗಿ ಮುಂದೂಡಲಾಗಿದೆ. ಸ್ವರ್ಣ, ಸೀತಾನದಿ ಮೈ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿವೆ. ಸುತ್ತಲಿನ ನಿವಾಸಿಗಳು ಆತಂಕದಲ್ಲಿದ್ದಾರೆ. ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸಂಚಾರವೇ ಸಂಪೂರ್ಣ ಸ್ಥಗಿತವಾಗಿರುವುದು ತಿಳಿದು ಬಂದಿದೆ.
key words : Rain-Udupi-Many-villages-aquatic