ಬೆಂಗಳೂರು,ಜು,27,2020(www.justkannada.in): ರಾಜಸ್ತಾನದಲ್ಲಿ ಅಪರೇಷನ್ ಕಮಲ ಖಂಡಿಸಿ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು.
ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಮುತ್ತಿಗೆ ಹಾಕಲು ಹೊರಟಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗವನ್ನ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಈ ವೇಳೆ ಸಿದ್ಧರಾಮಯ್ಯ ಪೊಲೀಸರ ನಡುವೆ ವಾಗ್ವಾದ ನಡೆಯಿತು.
ನಂತರ ಕಾಂಗ್ರೆಸ್ ನಾಯಕರು ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದರು. ಈ ವೇಳೆ ವಿಪಕ್ಷ ನಾಯಕ ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್ ನಲ್ಲಿ ಕರೆದೊಯ್ದರು.
ಪ್ರತಿಭಟನೆ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕರ್ನಾಟಕದಲ್ಲಿ ಅಪರೇಷನ್ ಕಮಲ ಮಾಡಿ ಸರ್ಕಾರ ಪತನ ಮಾಡಿದರು. ನಂತರ ಮಧ್ಯಪ್ರದೇಶದಲ್ಲಿ ಈ ರೀತಿ ಮಾಡಿದರು. ಈಗ ರಾಜಸ್ತಾನದಲ್ಲಿ ಅಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸಲು ಹೊರಟಿದ್ದಾರೆ. ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲ. ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ದೂರು ನೀಡಲು ಮುಂದಾಗಿದ್ದೇವೆ. ಆದರೆ ಅವಕಾಶ ನೀಡಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೋಲೆ. ಪ್ರಜಾಪ್ರಭುತ್ವ ಉಳಿಸಲು ಸಾಯಲೂ ಸಿದ್ಧ. ಸಂವಿಧಾನ ಕಾನೂನು ಉಳಿಸಲು ಕಾಂಗ್ರೆಸ್ ಹೋರಾಡುತ್ತದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಮೋದಿ ಪ್ರಜಾಪ್ರಭುತ್ವ ಬುಡಮೇಲು ಮಾಡಲು ಹೊರಟಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ಈ ರೀತಿಯಾಗುತ್ತಿದೆ. ಲೂಟಿ ಹೊಡೆಯಲು ನಮ್ಮ ಸಹಕಾರವಿಲ್ಲ. ಜನರನ್ನ ಉಳಿಸಲು ಕೋವಿಡ್ ನಿಯಂತ್ರಿಸಲು ಮಾತ್ರ ಸಹಕಾರ ಎಂದು ವಾಗ್ದಾಳಿ ನಡೆಸಿದರು.
Key words: Rajasthan-Operation kamala-condemns -protest – congress