ರಾಜೀವ್  ಕಂಡಂತೆ ʼ ತಾರಾನಾಥ್ ʼ: ನಮ್ಮಂಥವರ ಬುದ್ಧಿಗೆ, ಪ್ರಜ್ಞೆಗೆ ಎಟಕಿದಷ್ಟು !

'Taranath' as Rajiv saw it: It is beyond the reach of the intellect and consciousness of people like us.

ಫೋಟೋ: ನಾಗೇಶ್ ಪಾಣತ್ತಲೆ

 

ಮೈಸೂರು, ಜೂ.12,2024: (www.justkannada.in news) ಕನ್ನಡಿಗರ ಹೆಮ್ಮೆ, ಸಂಗೀತ ಲೋಕದ ದಿಗ್ಗಜ ಪಂಡಿಂತ್‌ ರಾಜೀವ್‌ ತಾರಾನಾಥರು ನಮ್ಮನ್ನು ಅಗಲಿದ್ದಾರೆ. ಕೆಲ ಕಾಲದಿಂದ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ  ಬಳಲುತ್ತಿದ್ದ ಅವರು ಮಂಗಳವಾರ ಸಂಜೆ ಇಹ ಲೋಕ ತ್ಯಜಿಸಿದರು.

ಸಂಗೀತ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮನ್ನಣೆಗಳಿಸಿದ್ದರು ಅವರೆಂದು ಅದರಿಂದ ಕೋಡು ಮೂಡಿಸಿ ಕೊಂಡವರಲ್ಲ. ಸಹಜವಾಗಿಯೇ ಎಲ್ಲರೊಂದಿಗೂ ಬೆರೆಯುತ್ತಿದ್ದ ಸರಳ ವ್ಯಕ್ತಿತ್ವದವರು. ಈ ಬಗ್ಗೆ ಮೈಸೂರಿನ ಹಿರಿಯ ಪತ್ರಕರ್ತರು, ಸದ್ಯ ಬೆಂಗಳೂರು ವಿಜಯ ಕರ್ನಾಟಕದಲ್ಲಿ ಸುದ್ಧಿ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚೀ.ಜ.ರಾಜೀವ್‌  ತಮ್ಮ ಫೇಸ್‌ ಬುಕ್‌ ನಲ್ಲಿ ಹೀಗೆ ಬರೆಯುತ್ತಾರೆ..

ಇದು ಜಂಬದ ಮಾತಲ್ಲ. ಪತ್ರಕರ್ತನಾಗಿ ಬಹಳಷ್ಟು ಸಂಖ್ಯೆಯ ಶ್ರೀಸಾಮಾನ್ಯರನ್ನೂ, ಒಂದಿಷ್ಟು ಸಂಖ್ಯೆಯ ಗಣ್ಯಮಹನೀಯರನ್ನು

ಸಂದರ್ಶಿಸಿರುವೆ. ಆದರೆ, ಅದೇಕೋ ಗೊತ್ತಿಲ್ಲ, ಯಾವ ಗಣ್ಯರ ಜತೆಗೂ ಫೋಟೋ ತೆಗೆಸಿಕೊಳ್ಳಬೇಕು ಅನಿಸುತ್ತಿರಲಿಲ್ಲ. ಆತ್ಮ ಪ್ರತ್ಯಯವೇ ? ವ್ಯಕ್ತಿ ತನ್ನ ಕುರಿತು ತಾನು ಹೊಂದಿರುವ  ಕೀಳರಿಮೆಯೇ ? ಗೊತ್ತಿಲ್ಲ. ಆದರೆ, ರಾಜೀವ್ ತಾರಾನಾಥ್ ಅವರನ್ನು ಮಾತನಾಡಿಸುವಾಗೆಲ್ಲಾ, ಈ ಜಿಜ್ಞಾಸೆಯಿಂದ ಹೊರಬರುತ್ತಿದ್ದೆ. ಹಾಗೆ ನೋಡಿದರೆ, ಅಭಿಜಾತ ಸಂಗೀತ ಎಂದರೆ ಏನೆಂದು ಅರ್ಥವಾಗದೇ ಇರುವ  ಪಾಮರರ ಲೋಕದವ ನಾನು. ಹಾಗಾಗಿ ‘ಸರೋದ್ ವಾದಕ’ ಪಂಡಿತ್ ರಾಜೀವ್ ತಾರಾನಾಥ್ ಅರ್ಥವಾಗುವುದು ದೂರದ ಮಾತು. ಈ ವಿಷಯದಲ್ಲಿ ಅವರು ಕೈಗೆ ಎಟಕುತ್ತಿರಲಿಲ್ಲ. ಆದರೆ, ಸಂಗೀತಗಾರ ಎಂಬ ಕಿರೀಟವಿಲ್ಲದ ಬುದ್ಧಿಜೀವಿ ತಾರಾನಾಥ್ ಅವರನ್ನು ಸ್ವಲ್ಪ ಬಲ್ಲೆ. ಮೈಸೂರಿನಲ್ಲಿದ್ದಾಗ ಮೂರು ಬಾರಿ ಅವರನ್ನು ವಿಜಯ ಕರ್ನಾಟಕ ಪತ್ರಿಕೆಗಾಗಿ ಮಾತನಾಡಿಸಿರುವರೆ. ಒಂದು ಸಂದರ್ಶನ ಮಾಡಿರುವೆ.

(ಇದಕ್ಕಾಗಿ ವಿಕದ ಸಂಪಾದಕರಾಗಿದ್ದ ಈ ರಾಘವನ್, ಸುಗತ ಶ್ರೀನಿವಾಸರಾಜು, ಮೈಸೂರು ಸ್ಥಾನಿಕ ಸಂಪಾದಕರಾಗಿದ್ದ ಅರವಿಂದ ನಾವಡ, ಪಿ.ಓಂಕಾರ್ ಅವರನ್ನು ನೆನಪಿಸಿಕೊಳ್ಳುವೆ)

ಇದೇ ನೆಪದಲ್ಲಿ ಅವರ ಮನೆಯಲ್ಲಿ ಕಾಫಿ ಟೀ ಆತಿಥ್ಯ ಸ್ವೀಕರಿಸಿರುವೆ. ಮುಸ್ಸಂಜೆಯ ಆತಿಥ್ಯವನ್ನು ನಿರಾಕರಿಸಿ, ಸಿಹಿ ಬೈಗುಳವನ್ನು ಎದೆಗಿಳಿಸಿಕೊಂಡಿರುವೆ. ಜತೆಗೆ,ಸಭೆ ಸಮಾರಂಭದ  ಭಾಷಣಗಳನ್ನು ಆಲಿಸಿ ವರದಿ ಮಾಡಿರುವೆ.

ಈ ಎಲ್ಲ ಸಂದರ್ಭದಲ್ಲೂ ಅವರು, ತಮ್ಮ   ಪ್ರಾಮಾಣಿಕ ದಿಟ್ಟ ನುಡಿ ಹಾಗೂ ನೈತಿಕತೆಯ ನೇರ ನಡೆಗೆ ಇಷ್ಟವಾಗುತ್ತಲೇ ಇದ್ದರು. ಅವರ ಮಾತಿನ ಲಯ, ಗಟ್ಟಿ ದನಿ, ನೋಟ, ಅಜಾನುಬಾಹು ಆಕೃತಿ- ಈಗಲೂ ಗೌರವ ಮೂಡಿಸುವ ಸಿಗ್ನೇಚರ್ಗಳಂತಿವೆ.

ತನ್ನನ್ನು ಮಾತನಾಡಿಸಲು ಬಂದಿರುವ ವ್ಯಕ್ತಿಯನ್ನು, ಆತನ ಸಾಮರ್ಥ್ಯವನ್ನು ಅಂದಾಜಿಸಿ, ಆ ವಿಷಯದಲ್ಲಿ ಆತನ ಮನೋಸ್ಥೈರ್ಯವನ್ನು ಎಳ್ಳಷ್ಟು ಕುಗ್ಗಿಸದೇ ತಾರಾನಾಥ್ ಮಾತನಾಡುತ್ತಿದ್ದರು. ಈ ಇಡೀ ಮಾತಿನ ಪ್ರಕ್ರಿಯೆಯಲ್ಲಿ ಅವರು ಸಂದರ್ಶಕನ ಪಾಲಿಗೆ ದೊಡ್ಡವರೇ ಆಗಿ ಉಳಿದರೂ, ಸಂದರ್ಶಕನ ಘನತೆಗೆ, ಆತ್ಮವಿಶ್ವಾಸಕ್ಕೆ ಸ್ವಲ್ಪವು ಧಕ್ಕೆಯಾಗುತ್ತಿರಲಿಲ್ಲ !

2014ರ ಆಷಾಢದ ಸೋನೆ ಮಳೆಯ ದಿನಗಳವು. ಮೊಬೈಲ್ ರಿಂಗಣಿಸಿತು. ನೋಡಿದರೆ, ರಾಜೀವ್ ತಾರಾನಾಥ್ ಹೆಸರು !

ಫೋನ್ ಎತ್ತಿದ ತಕ್ಷಣ,”ಹೇಯ್ ರಾಜೀವ. ಮೈಸೂರಿಗೊಬ್ಬ ಮಹಾಮಹಿಮ ಕಲಾವಿದರು ಬರುತ್ತಿದ್ದಾರೆ. ನೀನು ಪ್ರಚಾರ ನೀಡಬೇಕು ಕಣಯ್ಯ,” ಎಂದರು.

“ಯಾರು ಸಾರ್, ?” ಎಂದೇ. “ಅವರು ದೇಶದ ಅಪ್ರತಿಮ ಹಿಂದೂಸ್ತಾನಿ ಸಂಗೀತ ಕಲಾವಿದ ಉಸ್ತಾದ್ ಅಬ್ದುಲ್ ರಶೀದ್ ಖಾನ್ ಅಂತ. ಶತಾಯುಷಿಗಳು… ಈ ಘನ ಕಲಾವಿದನ ಇತಿಹಾಸ  ಗೊತ್ತೆ ? 15ನೇ ಶತಮಾನದ ಮೊಘಲ್ ಸಾಮ್ರಾಜ್ಯದಲ್ಲಿ ಬಾಳಿ ಬದುಕಿದ ಮಿಯಾ ತಾನ್‌ಸೇನ್ ಸಂಗೀತ ಕುಟುಂಬಕ್ಕೆ ಸೇರಿದ ಹಿರಿಯ ಜೀವ. ನೀವೆಲ್ಲಾ ನೋಡಬೇಕು. ಸಂಗೀತ ಕೇಳಬೇಕು,” ಎಂದರು !

“ನಾನೊಬ್ಬ ಯಾಕೆ ಸಾರ್ ? ಪತ್ರಕರ್ತರ ಸಂಘದಲ್ಲಿ ಒಂದು ಸಂವಾದವನ್ನೇ ಮಾಡಿಸೋಣ. ಎಲ್ರೂ ಸೇರಿ ಪ್ರಚಾರ ನೀಡುತ್ತೇವೆ. ನಮ್ಮ ಅಧ್ಯಕ್ಷರಾದ ಸಿ. ಕೆ. ಮಹೇಂದ್ರ ಜತೆ ಬರುವೆ,” ಎಂದೆ. “ವೆರಿ ಗುಡ್, ಪತ್ರಕರ್ತರು ಒಳ್ಳೆಯ ಸುದ್ದಿ ಸಮಾಚಾರವನ್ನು ಎಲ್ಲರಿಗೂ ಹಂಚಬೇಕು, ಅದು ಒಬ್ಬನ ಸ್ವತ್ತಲ್ಲ…,” ಎಂದು ಮಾತಿನಲ್ಲಿಯೇ ಬೆನ್ನಿಗೆ ಗುದ್ದಿದ್ದರು !

ಆ ಸಂವಾದ ಮೈಸೂರಿನ ಪತ್ರಿಕಾ ಭವನದಲ್ಲಿ ಚೆಂದವಾಗಿ ನಡೆದಿತ್ತು. ಹಿರಿಯರಾದ

ಎಂ. ಬಿ. ಮರಂಕಲ್, ಎಂ. ಎಸ್. ಕಾಶೀನಾಥ್, ಗೆಳೆಯರಾದ ಸಿ. ಕೆ. ಮಹೇಂದ್ರ, ಗಿರೀಶ್ ದೊಡ್ಡಮನಿ, ದಕೋಹಳ್ಳಿ ಚಂದ್ರಶೇಖರ್, ಕೆ ದೀಪಕ್ ಸೇರಿದಂತೆ ನಾವೊಂದಿಷ್ಟು ಜನ  ‘ಬಾಲಭಾಷೆ’ಯಲ್ಲಿ 106ರ ಹಿರಿಯ ಜೀವ   ರಶೀದ್ ತಾತನನ್ನು ಪ್ರಶ್ನಿಸಿದ್ದೆವು. ಮೊಮ್ಮಕ್ಕಳಿಗೆ ಕಥೆ ಹೇಳುವ ರೀತಿಯಲ್ಲಿಯೇ ಅವರು ನಮ್ಮ ಪ್ರಶ್ನೆಗಳಿಗೂ ಉತ್ತರಿಸಿದ್ದರು. ಕಡೆಯಲ್ಲಿ ರಾಜೀವ್ ತಾರಾನಾಥ್, “ನೋಡಯ್ಯ, ವಯಸ್ಸು ನೂರು ದಾಟಿದರೂ ವಯೋಸಹಜವಾಗಿ ಮಾತಿನಲ್ಲಿ ಮೂಡುವ ಅಸ್ಪಷ್ಟತೆ, ತೊದಲುವಿಕೆ ಹಾಗೂ ಕಂಪನಕ್ಕೆ  ರಶೀದ್ ಅವರ ಮಾತಿನಲ್ಲಿ  ಇರಲಿಲ್ಲ. ಬದಲಿಗೆ  ಸ್ಫುಟತೆ, ಖಚಿತತೆ, ನಿರರ್ಗಳತೆ ಮತ್ತು ಮಧುರತೆಯೂ ತುಂಬಿತ್ತು. ಇದೇ ಸಂಗೀತದ ಹೆಚ್ಚುಗಾರಿಕೆ ಕಣ್ಣಯ್ಯ,” ಎಂದಿದ್ದರು.

92 ವರ್ಷ ಬಾಳಿ ಬದುಕಿದ ರಾಜೀವ್ ತಾರಾನಾಥ್ ಅವರ ಮಾತು, ಗತ್ತು, ಗೈರತ್ತು ಎಲ್ಲವನ್ನೂ ನೋಡಿದಾಗ, ಅವರ ಇನ್ನೂ 25 ವರ್ಷ ಬದುಕಿದ್ದರೂ ಹೀಗೆ ಇರುತ್ತಿದ್ದರೇನೋ ಅನಿಸುತ್ತೆ.

ಫೋಟೋ: ನಾಗೇಶ್ ಪಾಣತ್ತಲೆ

ಪತ್ರಿಕೆಗಾಗಿ ನಡೆಸಿದ ಸಂದರ್ಶನದಲ್ಲಿ, ಮೊದ ಮೊದಲು ಅವರು ನಮ್ಮಂಥವರ ಮಟ್ಟಕ್ಕೆ ಇಳಿದು, ಬಳಿಕ ನಮ್ಮನ್ನು  ಅವರ ಎತ್ತರಕ್ಕೆ ಕೊಂಡೊಯ್ಯುತ್ತಿದ್ದರು. ಸಂದರ್ಶನದಾಚೆಗೆ ಅವರು ದೊಡ್ಡವರ ಸಣ್ಣಾಟಗಳನ್ನೆಲ್ಲಾ ಹಂಚಿಕೊಂಡು, ಮನುಷ್ಯ ತನ್ನ ವೃತ್ತಿಯಲ್ಲಿ ಪ್ರಮಾಣೀಕೃತವಾದ ಶ್ರೇಷ್ಠತೆಯನ್ನು ಸಾಧಿಸಿದರೆ ಸಾಲದು, ನಡೆ-ನುಡಿಯಲ್ಲಿಯೂ ದೊಡ್ಡ ಮನುಷ್ಯನಾಗಿರಬೇಕು ಎನ್ನುತ್ತಿದ್ದರು. ಅದೇ ರಾಜೀವ್ ತಾರಾನಾಥ್ ನೈತಿಕತೆ !

ಸರೋದ್ ವಾದಕರಲ್ಲದ ರಾಜೀವ್ ತಾರಾನಾಥ್ ಎಂಬ ಘನ ವ್ಯಕ್ತಿತ್ವ ಸರೋದ್ ವಾದನದ ಇಂಪು-ಕಂಪು ಗೊತ್ತಿಲ್ಲದವರ ನಡುವೆಯೂ ನೆನಪಾಗಿ ಉಳಿದಿರುತ್ತಾರೆ. ಹೋಗಿ ಬನ್ನಿ ಸಾರ್….

key words: Sarod Maestro, Pt. Rajeev Taranath, Passes Away, at Mysore