ಬೆಂಗಳೂರು, ಮಾರ್ಚ್ 6,2021(www.justkannada.in): ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ (ಆರ್ ಜಿಯುಹೆಚ್ಎಸ್) ಬೆಳ್ಳಿ ಹಬ್ಬ ಆಚರಣೆ ಅಂಗವಾಗಿ ವಿಶ್ವ ವಿದ್ಯಾಲಯದ ಅಧೀನದಲ್ಲಿರುವ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕರುಗಳಿಗೆ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಮಾರ್ಚ್ 9 ಮತ್ತು 10 ರಂದು ಆರ್ ಜಿಯುಹೆಚ್ಎಸ್ ಆವರಣದಲ್ಲಿ ಏರ್ಪಡಿಸಲಾಗಿದೆ.
ಕೋವಿಡ್ ಕಾಲಘಟ್ಟದಲ್ಲಿ ನಡೆದ ಕ್ರೀಡಾ ಚಟುವಟಿಕೆಗಳಲ್ಲಿ ಕೈಗೊಂಡ ಮುಂಜಾಗೃತ ಕ್ರಮಗಳು, ವಿವಿ ಅಧೀನದಲ್ಲಿರುವ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಇತ್ತೀಚಿನ ವಿದ್ಯಾಮಾನಗಳು ಹಾಗೂ ಬೆಳವಣಿಗೆಗಳ ಕುರಿತು ದೈಹಿಕ ಶಿಕ್ಷಣ ನಿರ್ದೇಶಕರುಗಳಿಗೆ ವಿಚಾರ ಸಂಕಿರಣದಲ್ಲಿ ಮಾಹಿತಿ ನೀಡಲಾಗುವುದು ಎಂದು ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಉಪ ಕುಲಪತಿ ಡಾ. ಎಸ್. ಸಚ್ಚಿದಾನಂದ ತಿಳಿಸಿದ್ದಾರೆ.
ಆರೋಗ್ಯ ವಿವಿ ಅಧೀನದಲ್ಲಿ 857 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ವಿಭಾಗ ಸುಧಾರಣೆ ಮತ್ತು ವೃತ್ತಿಪರತೆ ಅಭಿವೃದ್ದಿ ಕಾರ್ಯಕ್ರಮದಡಿಯಲ್ಲಿ ಈ ವಿಚಾರ ಸಂಕಿರಣ ನಡೆಯಲಿದೆ. ವಿಚಾರ ಸಂಕಿರಣದ ಮುಖ್ಯ ದ್ಯೇಯೋದ್ದೇಶಗಳೇನೆಂದರೆ, ದೈಹಿಕ ಶಿಕ್ಷಣ ನಿರ್ದೇಶಕರುಗಳು ಕ್ರೀಡಾ ಕಲಿಕೆ ಸುಧಾರಣೆ ಕುರಿತು ತರಬೇತಿ ಪಡೆದು ತಾವು ಪಡೆದ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕು. ಈ ಮೂಲಕ ವಿದ್ಯಾರ್ಥಿಗಳು ಆರೋಗ್ಯ ಮತ್ತು ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳುವಂತೆ ಉತ್ತೇಜಿಸುವುದು ವಿಚಾರ ಸಂಕಿರಣದ ಉದ್ದೇಶವಾಗಿದೆ.
ಫಿಟ್ ಇಂಡಿಯಾ ಕಲ್ಪನೆ ಸಕಾರಕ್ಕೆ ಕ್ರಮ…
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಫಿಟ್ ಇಂಡಿಯಾ’ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಜಾಗೃತಿಗೊಳಿಸಿ ‘ಫಿಟ್ ಇಂಡಿಯಾಕ್ಕಾಗಿ ಫಿಟ್ ಆರ್ ಜಿಯುಹೆಚ್ಎಸ್’ ಎಂದು ಪ್ರಸ್ತುತಿ ಪಡಿಸಲು ವಿವಿ ನಿರ್ಧರಿಸಿದೆ.
ಆರ್ ಜಿಯುಹೆಚ್ಎಸ್ ಉಪ ಕುಲಪತಿ ಡಾ, ಸಚ್ಚಿದಾನಂದ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸಿ.ಕೆ. ಕಿಶೋರ್ ಕುಮಾರ್ ಅವರು ಕೋವಿಡ್ ಕಾಲಘಟ್ಟದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಗಳ ಜವಾಬ್ದಾರಿ ಮತ್ತು ಹೊಣೆಗಾರಿಕೆ ಕುರಿತು ಉಪನ್ಯಾಸ ನೀಡಲಿದ್ದಾರೆ.
1992ರಲ್ಲಿ ಕ್ರೀಡಾ ಕೋಟದಲ್ಲಿ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪ್ರವೇಶ ಪಡೆದು ನಂತರ ಸ್ಪೋಟ್ಸ್ ಮೆಡಿಸಿನ್ ನಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ದಾರವಾಡದ ಡಾ. ಕಿರಣ್ ಕುಲಕರ್ಣಿ ಅವರು ಕೋವಿಡ್ ಕಾಲಘಟ್ಟದಲ್ಲಿ ಸ್ಪೋಟ್ಸ್ ಮೆಡಿಸಿನ್ ಕುರಿತು ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಹಿರಿಯ ಅಧಿಕಾರಿ, ಡಾ. ಮಣಿ ಲಾಲ್ ಅವರು ಫಿಟ್ ಇಂಡಿಯಾ ತರಬೇತಿ ವಿಧಾನ ಕುರಿತು ಹಾಗು ಡಾ. ಪ್ರಕಾಶ್ ರಾವ್ ಅವರು ಕ್ರೀಡೆಯಲ್ಲಿ ಮನಶಾಸ್ತ್ರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಡಾ. ಬಿ ಭರತ್ ಕುಮಾರ್ ಪೌಷ್ಠಿಕ ಆಹಾರ ಕ್ರಮದಿಂದ ಕಾರ್ಯಕ್ಷಮತೆ ಮೇಲಾಗುವ ಪರಿಣಾಮ ಕುರಿತು ಮಾತನಾಡಲಿದ್ದಾರೆ. ದೈಹಿಕ ಶಿಕ್ಷಣ ನಿರ್ದೇಶಕರು ಪ್ರಸಕ್ತ ಸಾಲಿನ ಕ್ರೀಡಾ ವೇಳಾಪಟ್ಟಿ ತಯಾರಿ ಮತ್ತು ಕ್ರೀಯಾ ಯೋಜನೆ ಕುರಿತು ಸಿದ್ದತೆ ನಡೆಸಲಿದ್ದಾರೆ.
ಕ್ರೀಡಾ ಕೋಟದಲ್ಲಿ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದು ಪದವಿ ಪಡೆದಿರುವ ವಿದ್ಯಾರ್ಥಿಗಳನ್ನು ಕ್ರೀಡಾ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುಂತೆ ದೈಹಿಕ ಶಿಕ್ಷಣ ನಿರ್ದೇಶಕರು ಪ್ರೇರಿಪಿಸುವುದು ಕೂಡ ಈ ವಿಚಾರ ಸಂಕಿರಣದ ಉದ್ದೇಶಗಳಲ್ಲೊಂದಾಗಿದೆ ಎಂದು ಆರ್ ಜಿಯುಹೆಚ್ಎಸ್ ತಿಳಿಸಿದೆ.
Key words: Rajiv Gandhi- Health university-Seminar – Physical Education-Health India-march 9