ಬೆಂಗಳೂರು ಡಿ.7,2019(www.justkannada.in): ರಾಮನಗರ ಜಿಲ್ಲಾ ವಾರ್ತಾಧಿಕಾರಿ ಎಸ್.ಶಂಕರಪ್ಪ ಅವರು ಆರಂಭಿಸಿರುವ ವಿನೂತನ ಕಾರ್ಯಕ್ರಮ ‘ಗ್ರಾಮ ಸೇವೆ’ಗೆ ರಾಜ್ಯ ಸರ್ಕಾರದಿಂದ ಮೆಚ್ಚುಗೆ ಪಾತ್ರವಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಕಡ್ಡಾಯಗೊಳಿಸಿ ಸರ್ಕಾರಿ ಅದೇಶ ಹೊರಡಿಸಲಾಗಿದೆ.
ಸರ್ಕಾರದ ಜನಪರ ಮಾಹಿತಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕನಕಪುರ ತಾಲ್ಲೂಕಿನ ಕಸಬಾ ಹೋಬಳಿ ಕೂತಗಾನಹಳ್ಳಿ ಬಳಿಯ ಇರುಳಿಗರ ಕಾಲೋನಿಯಲ್ಲಿ ನ. 23ರಂದು ಮೊದಲ ಗ್ರಾಮಸೇವೆ ಕಾರ್ಯಕ್ರಮ ಆಯೋಜಿಸಿತ್ತು.
ಸ್ಥಳೀಯರ ನೆರವಿನೊಂದಿಗೆ ಇಡೀ ಗ್ರಾಮದಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ, ಅರಣ್ಯ ಇಲಾಖೆ ನೆರವಿನಿಂದ ಗಿಡ ನೆಡುವ ಕಾರ್ಯಕ್ರಮ, ಆರೋಗ್ಯ ಇಲಾಖೆ ಸಹಕಾರದಿಂದ ಆರೋಗ್ಯ ಶಿಬಿರ ನಡೆಸಿ ಗ್ರಾಮದ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿಸಲಾಗಿತ್ತು.
ಸಂಜೆ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ಮನೆ ಮನೆಗೆ ಹಂಚುವ ಜೊತೆಗೆ ಅಲ್ಲಿಯೇ ಜಿಲ್ಲಾ ವಾರ್ತಾಧಿಕಾರಿ ಎಸ್. ಶಂಕರಪ್ಪ ಅವರು ಇಡೀ ರಾತ್ರಿ ವಾಸ್ತವ್ಯ ಹೂಡಿ ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ಸಭೆ ನಡೆಸಿ, ಬೀದಿ ನಾಟಕ, ಸಂಗೀತ ಕಾರ್ಯಕ್ರಮಗಳ ಮೂಲಕ ಸರ್ಕಾರಿ ಯೋಜನೆಗಳ ಮಹತ್ವವನ್ನು ಸಾರಿದ್ದರು.
ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುತ್ತದೆ. ಇದರಿಂದ ಆಗುವ ಅನುಕೂಲತೆಯ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಇದಕ್ಕಾಗಿ ಜನರ ಜತೆ ವಾಸ್ತವ್ಯ ಹೂಡಿ ಸರ್ಕಾರದ ಯೋಜನೆಗಳ ಮಾಹಿತಿ ಮನೆ ಬಾಗಿಲಿಗೆ ತಲುಪಿಸಲು ಗ್ರಾಮಸೇವೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಪ್ರತಿ ತಿಂಗಳ ನಾಲ್ಕನೇ ಶನಿವಾರದ ಸರ್ಕಾರಿ ರಜೆ ದಿನವನ್ನು ಗ್ರಾಮ ಸೇವೆಗೆ ಮುಡಿಪಾಗಿಟ್ಟು ಕುಗ್ರಾಮಗಳಲ್ಲಿ ವಾಸ್ತವ್ಯಹೂಡಿ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಹಾಗೂ ಪರಿಸರ, ಅರೋಗ್ಯ, ಶಿಕ್ಷಣ ಕುರಿತು ಅರಿವು ಮೂಡಿಸಲಾಗುವುದು ಎಂದು ತಿಳಿಸಿದ್ದರು.
ಕನಕಪುರ ತಾಲೂಕಿನ ಕೂತಗಾನಹಳ್ಳಿ ಬಳಿಯ ಇರುಳಿಗರ ಕಾಲೊನಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮನೆ ಬಾಗಿಲಿಗೆ ಬಂದ ಅಧಿಕಾರಿಗಳ ತಂಡವನ್ನು ಅವರು ಆತ್ಮೀಯವಾಗಿ ಬರ ಮಾಡಿಕೊಂಡರು. ಅವರಿಂದ ಸರ್ಕಾರದಿಂದ ತಮಗಾಗಿಯೇ ಇರುವ ಸೌಲಭ್ಯಗಳ ಮಾಹಿತಿ ಪಡೆದರು.
ಗ್ರಾಮ ಸೇವೆ ಬಗ್ಗೆ ಜಾಲತಾಣಗಳು ಹಾಗೂ ಇತರ ಸಮೂಹ ಮಾಧ್ಯಮಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ತಿಂಗಳಿಗೊಮ್ಮೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರದ ಆದೇಶ ಹೊರಡಿಸಿದೆ.
ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ದೃಢ ಹೆಜ್ಜೆಗಳು ಎಂಬ ಆಶಯದೊಂದಿಗೆ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೆರವು, ಮೀನುಗಾರರ ಸಾಲ ಮನ್ನಾ, ನೇಕಾರರ ಸಾಲಮನ್ನಾ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ 6000 ರೂ.ಗಳ ಸಹಾಯಧನದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 4000 ರೂ.ಗಳನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಘೋಷಿಸಿರುವ 4000 ರೂ.ಗಳಲ್ಲಿ ಮೊದಲ ಕಂತಿನ 2000 ರೂ.ಗಳನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ. ರೈತರು ಬೆಳೆದ ಹಸಿರು ಮೇವು ಖರೀದಿ ದರ ಪ್ರತಿ ಟನ್ ಗೆ 3000 ರೂ. ಗಳಿಂದ 4000 ರೂ.ಗಳಿಗೆ ಹೆಚ್ಚಿಸಲಾಗಿದೆ.
ಮೀನುಗಾರರ 60 ಕೋಟಿ ರೂ. ಸಾಲ ಮನ್ನಾ ಮಾಡಲು ಯೋಜಿಸಲಾಗಿದ್ದು, ಇದರಿಂದ 23000ಕ್ಕೂ ಹೆಚ್ಚು ಮೀನುಗಾರರಿಗೆ ವಿಶೇಷವಾಗಿ ಮಹಿಳಾ ಮೀನುಗಾರರಿಗೆ ಪ್ರಯೋಜನವಾಗಲಿದೆ. ನೇಕಾರರ 98 ಕೋಟಿ ರೂ. ಸಾಲ ಮನ್ನಾ ಮಾಡಲು ಯೋಜಿಸಲಾಗಿದ್ದು, 29000 ಕ್ಕೂ ಹೆಚ್ಚು ನೇಕಾರರಿಗೆ ಪ್ರಯೋಜನವಾಗಲಿದೆ. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂ.ಗಳ ಆರ್ಥಿಕ ನೆರವು ಒದಗಿಸಲಾಗುತ್ತಿದೆ ಎಂಬ ಮಾಹಿತಿ ಸೇರಿದಂತೆ ಎಲ್ಲ ವರ್ಗದ ಜನರಿಗೆ ಇರುವ ಸರ್ಕಾರಿ ಸೌಲಭ್ಯ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು. ಬೀದಿ ನಾಟಕ ತಂಡ ಹಾಗೂ ಸಂಗೀತ ಕಾರ್ಯಕ್ರಮಗಳ ಮೂಲಕ ಅರಿವು ಸಹ ಮೂಡಿಸುದ್ದು ಎಲ್ಲರ ಗಮನ ಸೆಳೆಯಿತು.
Key words: ramanagar- gram seva- Government -appreciation.