ವಿದ್ಯುತ್‌ ದೀಪಾಲಂಕಾರ ಎಂದರೆ ಸೆಸ್ಕ್‌ ಸಿಬ್ಬಂದಿಯ ನೆನೆಯುವರು- ಶಾಸಕ ರಮೇಶ್‌ ಬಂಡಿಸಿದ್ದೇಗೌಡ

ಮೈಸೂರು, ಜನವರಿ,1, 2025(www.justkannada.in) ರಾಜ್ಯದಲ್ಲಿ ಎಲ್ಲೇ ವಿದ್ಯುತ್‌ ದೀಪಾಲಂಕಾರ ಮಾಡಬೇಕು ಎಂದರೂ, ಸೆಸ್ಕ್ ಅವರನ್ನೇ ಕರೆಯಬೇಕು ಎನ್ನುವಂತಾಗಿದೆ. ಈ ಯಶಸ್ಸು ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಲ್ಲುತ್ತದೆ, ಎಂದು ಶಾಸಕರೂ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ ಹೇಳಿದ್ದಾರೆ. 

ಹೊಸವರ್ಷದ ಸಂದರ್ಭದಲ್ಲಿ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಸೆಸ್ಕ್‌ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

“ನಾವು ಮಾಡುವ ಕೆಲಸಗಳಿಂದ ಜನ ನಮ್ಮನ್ನು ಗುರುತಿಸಬೇಕು, ಈ ನಿಟ್ಟಿನಲ್ಲಿ ಪರಿಶ್ರಮ ಹಾಕೋಣ,  ಶಾಶ್ವತವಾಗಿ ಉಳಿಯುವಂಥ ಕೆಲಸಗಳನ್ನು ಮಾಡೋಣ. ನಾವು ಮಾಡುವ ಕೆಲಸಗಳಿಂದ ಜನ ನಮ್ಮನ್ನು ಸ್ಮರಿಸುತ್ತಾರೆ. ನಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುವುದು ನಿಶ್ಚಿತ, ಅದಕ್ಕಾಗಿ ಕಾಯುವ ಮನಸ್ಥಿತಿ ಇರಬೇಕು. ಅದಕ್ಕೆ ಉದಾಹರಣೆ ಅಂದರೆ, ಎಲ್ಲೇ ವಿದ್ಯುತ್‌ ದೀಪಾಲಂಕಾರ ಮಾಡಿದರೂ, ಸೆಸ್ಕ್ ಅವರನ್ನೇ ಕರೆಯಬೇಕು ಎನ್ನುವಂತಾಗಿದೆ. ಈ ಯಶಸ್ಸು ನಿಗಮದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಲ್ಲುತ್ತದೆ,” ಎಂದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಶೀಲಾ ಅವರು ಮಾತನಾಡಿ, “ಸೆಸ್ಕ್‌ ವತಿಯಿಂದ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಲಾಗಿದೆ. ಸಂಸ್ಥೆಯ ಕೆಲಸವನ್ನು ಹೆಚ್ಚು ಶ್ರದ್ಧೆಯಿಂದ ಮಾಡಿ, ತ್ವರಿತವಾಗಿ ಸೇವೆ ಒದಗಿಸುವ ಗುರಿ ನಿಮ್ಮದಾಗಲಿ.  ಹಿಂದಿನ ವರ್ಷದ ಕಹಿ ಘಟನೆಗಳನ್ನು ಮರೆತು, ಸಿಹಿ ಘಟನೆಗಳ ಪ್ರೇರಣೆಯೊಂದಿಗೆ ಮುನ್ನಡೆಯೋಣ,” ಎಂದರು.

ನಿಗಮದ ತಾಂತ್ರಿಕ ವಿಭಾಗದ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು ಮಾತನಾಡಿ, “ಹಿಂದಿನ ವರ್ಷ ಎಲ್ಲರೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ನಮ್ಮ‌ ಜವಾಬ್ದಾರಿಗಳನ್ನು ಅರಿತು, ತಂಡವಾಗಿ ಕೆಲಸ ಮಾಡೋಣ. ಶ್ರೇಯಸ್ಸು ನಮ್ಮದಾಗಲಿದೆ,” ಎಂದರು.

ಇದೇ ಸಂದರ್ಭದಲ್ಲಿ ಸೆಸ್ಕ್ ಅಧಿಕಾರಿಗಳು, ನಿಗಮದ ವತಿಯಿಂದ ಮಾಡಿರುವ ಕೆಲಸಗಳು ಹಾಗೂ ಮುಂದಿನ ದಿನಗಳಲ್ಲಿ ಮಾಡಬೇಕಿರುವ ಕೆಲಸಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು. ಸಭೆಯಲ್ಲಿ ಸೆಸ್ಕ್ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Key words:  electric lighting, CESC staff, MLA, Ramesh Bandisidde Gowda